ಜೀವ ಹೋದರೂ ಬಿಜೆಪಿ, ಆರೆಸ್ಸೆಸ್‌ನೊಂದಿಗೆ ಕೈಜೋಡಿಸಲಾರೆ: ಲಾಲು

ಲಕ್ನೊ,ಫೆ. 21: ರಾಷ್ಟ್ರೀಯ ಜನತಾದಳ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ 2019ರ ಮಹಾಚುನಾವಣೆ ವೇಳೆಗೆ ಮಹಾಮೈತ್ರಿಕೂಟದ ಸೂಚನೆಯನ್ನು ನೀಡಿದ್ದಾರೆ. ನರೇಂದ್ರ ಮೋದಿ ಭಾರತದ ಟ್ರಂಪ್ ಆಗಿದ್ದಾರೆ ಎಂದು ಮೋದಿಯನ್ನು ಟೀಕಿಸಿದ ಲಾಲೂ ಪ್ರಸಾದ್ ಯಾದವ್‌ರು ಪ್ರಶ್ನೆಯೊಂದಕ್ಕೆ ಉತ್ತರಿಸಿ ಪ್ರಧಾನಿಯಾಗುವುದು ಯಾರಿಗೆ ಇಷ್ಟವಿಲ್ಲದ ವಿಚಾರ ಆದರೆ ಎಲ್ಲರೂ ಸೇರಿ ಪ್ರಧಾನಿ ಸ್ಥಾನ ಅಭ್ಯರ್ಥಿಯಾರೆಂದು ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ. ಅಮರ್ ಸಿಂಗ್ ಭಾರತೀಯ ರಾಜಕಾರಣದಲ್ಲಿ ಯಾವಾಗಲೂ ಅಮರವಾಗಿರಲಿದ್ದಾರೆ. ಅವರು ಯಾವ ಮನೆಗೆ ಹೋಗುತ್ತಾರೊ ಆಮನೆ ಒಡೆದು ಹೋಗುತ್ತದೆ. ಅಮರ್ ಸಿಂಗ್ ಕೆಡವುದರಲ್ಲಿ ನಿಸ್ಸೀಮ ಎಂದು ವ್ಯಂಗ್ಯವಾಡಿದ್ದಾರೆ.
ಅಮರ್‌ಸಿಂಗ್ ಅಂಬಾನಿ ಸಹೋದರರನ್ನು ಬೇರೆಮಾಡುವ ಕೆಲಸ ಮಾಡಿದರು. ಅವರೊಬ್ಬ ಮರಕುಟಿಗನಂತಿದ್ದಾರೆ. ಮೆಲ್ಲ, ಮೆಲ್ಲಗೆ ಇತರರ ಮನೆಯನ್ನು ಒಡೆದು ಬಿಡುತ್ತಾರೆ. ಬಹುಜನಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿಯ ಕುರಿತು ಜನರಲ್ಲಿ ಸಂದೇಹವಿದೆ. ಅವರು ಮೊದಲು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ ಲಾಲೂ ಸತ್ತರೂ ಆರೆಸ್ಸೆಸ್,ಬಿಜೆಪಿ ಜೊತೆ ಕೈಜೋಡಿಸುವುದಿಲ್ಲ ಎಂದು ಲಾಲುಪ್ರಸಾದ್ ಯಾದವ್ ಹೇಳಿದರು.
ನಮ್ಮ ರಾಜಕಾರಣ ಅಲ್ಲಿಗೆ ಕೊನೆಗೊಂಡರೂ ಆದೀತು. ಆದರೆ ಬಿಜೆಪಿ ಆರೆಸ್ಸೆಸ್‌ಗಳೊಂದಿಗೆ ಮೈತ್ರಿ ಇಲ್ಲ. ಮುಲಾಯಂ ಸಿಂಗ್‌ರನ್ನು ಸಮಾಜವಾದಿ ಪಾರ್ಟಿಯ ಸಂರಕ್ಷಕರನ್ನಾಗಿ ಮಾಡಿದ ಕುರಿತುಪ್ರಸ್ತಾಪಿಸಿದ ಲಾಲು ಇನ್ನು ಅವರು ಮಹಂತರಂತೆ ಪಕ್ಷದ ಬೆಳವಣಿಗೆ ಕುರಿತು ನಿಗಾವಿರಿಸಲಿದ್ದಾರೆ. ಅವರು ರಾಜಕೀಯವನ್ನು ತೊರೆದಿಲ್ಲ. ಹಾಸಿಗೆಯಲ್ಲಿ ಕೂತು ಕೂಡಾ ರಾಜಕೀಯ ಮಾಡಲು ಸಾಧ್ಯವಿದೆ ಎಂದಿದ್ದಾರೆ. ಉತ್ತರಪ್ರದೇಶದ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಗಳು ನೆಲಕಚ್ಚಲಿವೆ ಎಂದು ಲಾಲು ಹೇಳಿದರೆಂದು ವರದಿ ತಿಳಿಸಿದೆ.







