ಎಐಎಡಿಎಂಕೆ ಅಧಿನಾಯಕಿ ಶಶಿಕಲಾ 10 ಕೋಟಿ ರೂ. ದಂಡ ಕಟ್ಟದಿದ್ದರೆ ಏನಾಗುತ್ತದೆ?

ಬೆಂಗಳೂರು, ಫೆ.21: ಎಐಎಡಿಎಂಕೆ ಅಧಿನಾಯಕಿ ವಿ.ಕೆ.ಶಶಿಕಲಾ ನಟರಾಜನ್ ಆದಾಯ ಮೀರಿದ ಆಸ್ತಿ ಹೊಂದಿರುವ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಸುಪ್ರೀಂ ಕೋರ್ಟ್ ಫೆ.14ರಂದು ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಅವರಿಗೆ 4 ವರ್ಷಗಳ ಜೈಲು ಸಜೆ ಮತ್ತು ತಲಾ 10 ಕೋಟಿ ರೂ. ದಂಡ ವಿಧಿಸಿತ್ತು.
ಫೆ.15ರಿಂದ ಶಶಿಕಲಾ ಅವರ ಸಂಬಂಧಿಕರಾದ ಜೆ.ಇಳವರಸಿ ಮತ್ತು ವಿ.ಎನ್. ಸುಧಾಕರನ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ಧಾರೆ. ಒಂದು ವೇಳೆ ಇವರು ತಲಾ 10 ಕೋಟಿ ರೂ. ದಂಡ ಪಾವತಿಸಲು ತಪ್ಪಿದರೆ ಮತ್ತೆ 13 ತಿಂಗಳು ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಜೈಲು ಅಧೀಕ್ಷಕರಾದ ಕೃಷ್ಣ ಕುಮಾರ್ ಮಾಹಿತಿ ನೀಡಿದ್ದಾರೆ.
ಶಶಿಕಲಾ ಈ ಹಿಂದೆ ಸೆಪ್ಟಂಬರ್ 2014ರಲ್ಲಿ ಪರಪ್ಪನ ಅಗ್ರಹಾರದ ಜೈಲಿನಲ್ಲಿ 21 ದಿನಗಳ ಶಿಕ್ಷೆ ಅನುಭವಿಸಿದ್ದರು. ಈ ಕಾರಣದಿಂದಾಗಿ ಅವರ ಜೈಲು ಶಿಕ್ಷೆ ಅವಧಿಯಲ್ಲಿ 21 ದಿನ ಕಡಿತಗೊಂಡಿದೆ. ಹೀಗಾಗಿ ಇನ್ನೂ 3 ವರ್ಷ ಮತ್ತು 11 ತಿಂಗಳು ಜೈಲು ಶಿಕ್ಷೆ ಎದುರಿಸಬೇಕಾಗಿದೆ. ಜೈಲಿನಲ್ಲಿರುವ ಮೂವರಿಗೂ ಒಂದೇ ರೀತಿಯ ಆತಿಥ್ಯ. ಭದ್ರತೆಯ ಕಾರಣಕ್ಕಾಗಿ ಶಶಿಕಲಾ ಮತ್ತು ಇಳವರಸಿ ಮಹಿಳೆಯರ ವಿಭಾಗದ ಜೈಲಿನ ಚಿಕ್ಕ ಕೋಣೆಯಲ್ಲಿದ್ದಾರೆ. ಸುಧಾಕರನ್ ಪುರುಷರ ವಿಭಾಗದ ಜೈಲಿನಲ್ಲಿ ಶಿಕ್ಷೆ ಎದುರಿಸುತ್ತಿದ್ಧಾರೆ. ದಿನವೂ ಜೈಲಿನ ವೈದ್ಯರು ಇವರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಅಗತ್ಯದ ಔಷಧಿ ಪೂರೈಕೆ ಮಾಡಲಾಗುತ್ತಿದೆ.





