ಮನಪಾ: 253 ಕೋ.ರೂ. ಮಿಗತೆ ಬಜೆಟ್ ಮಂಡನೆ

ಮಂಗಳೂರು, ಫೆ.21: ಬ್ಯಾಂಕ್ ಉಳಿತಾಯ ಹಣ ಸಹಿತ 909.76 ಕೋ.ರೂ. ನಿರೀಕ್ಷಿತ ಆದಾಯ ಮತ್ತು 655.83 ಕೋ.ರೂ. ನಿರೀಕ್ಷಿತ ವೆಚ್ಚ. 253.93 ಕೋ.ರೂ. ಮಿಗತೆ.
ಇದು ಮನಪಾ ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ಮನಪಾ ಸಭಾಂಗಣದಲ್ಲಿ ಮಂಗಳವಾರ ತೆರಿಗೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷೆ ಅಪ್ಪಿ ಮಂಗಳವಾರ ಮಂಡಿಸಿದ 2017-18ನೆ ಸಾಲಿನ ಬಜೆಟ್‌ನ ಅಂಕಿ ಅಂಶ.
2015-16, 1016-17ನೆ ಸಾಲಿನ ಬಜೆಟ್‌ನ ಮೊತ್ತಕ್ಕೆ ಹೋಲಿಸಿದರೆ ಇದು ಭಾರೀ ಗಾತ್ರದ ಬಜೆಟ್. ಅಷ್ಟೇ ಅಲ್ಲ ಇದು ಗೊಂದಲ, ವ್ಯತ್ಯಾಸದಿಂದ ಕೂಡಿದ ಅಂಕಿ ಅಂಶವೂ ಹೌದು. ಬಜೆಟ್ ಪ್ರತಿಯಲ್ಲಿ ನೀಡಲಾದ ಅಂಕಿ ಅಂಶಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಎಸ್ಸಿ-ಎಸ್ಟಿ ಸಮುದಾಯದ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ಪ್ರಕಟಿಸಿಲ್ಲ. ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಅವೈಜ್ಞಾನಿಕ ದರ ವಿಧಿಸಲಾಗಿದೆ. ಬಡ ವ್ಯಾಪಾರಿಗಳ ಮೇಲೆ ಅಧಿಕ ತೆರಿಗೆ ವಿಧಿಸಲಾಗಿದೆ. ಒಟ್ಟಿನಲ್ಲಿ ಇದೊಂದು ನಿರಾಶದಾಯಕ ಬಜೆಟ್ ಎಂದು ಪ್ರತಿಪಕ್ಷ ನಾಯಕಿ ರೂಪಾ ಡಿ.ಬಂಗೇರಾ ಆರೋಪಿಸಿದರು.
ಈ ಆರೋಪವನ್ನು ಪುಷ್ಠೀಕರಿಸುವಂತೆ ಬಿಜೆಪಿ ಕಾರ್ಪೊರೇಟರ್‌ಗಳಾದ ತಿಲಕರಾಜ್, ರಾಜೇಂದ್ರ, ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿದರೆ, ಕಾಂಗ್ರೆಸ್ ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜ, ಅಶೋಕ್ ಡಿ.ಕೆ., ರವೂಫ್ ಬಜಾಲ್, ಮುಹಮ್ಮದ್ ಕುಂಜತ್ತಬೈಲ್, ಶಶಿಧರ ಹೆಗ್ಡೆ ಮಂಗಳೂರಿನ ಅಭಿವೃದ್ಧಿ ದೃಷ್ಟಿಯಿಂದ ಮಂಡಿಸಲಾದ ಇದು ಅತ್ಯಂತ ಜನಪರ ಬಜೆಟ್ ಎಂದು ಬಣ್ಣಿಸಿದರು.
ಬಜೆಟ್ ಪರ-ವಿರೋಧವನ್ನು ಆಲಿಸಿದ ಮೇಯರ್ ಹರಿನಾಥ್ ತನ್ನ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರಲ್ಲದೆ, ಬಜೆಟ್‌ಗೆ ಅಂಗೀಕಾರ ನೀಡುವಂತೆ ಮನವಿ ಮಾಡಿಕೊಂಡರು.
ಸಭೆಯಲ್ಲಿ ಉಪಮೇಯರ್ ಸುಮಿತ್ರಾ ಕರಿಯ, ಆಯುಕ್ತ ಮುಹಮ್ಮದ್ ನಝೀರ್, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲ್ಯಾನ್ಸಿ ಲಾಟ್ ಪಿಂಟೊ, ಮುಹಮ್ಮದ್ ಬಶೀರ್, ಕವಿತಾ ಸನಿಲ್ ಉಪಸ್ಥಿತರಿದ್ದರು.
ಬಜೆಟ್ ಹೈಲೆಟ್ಸ್:
2017-18ನೆ ಸಾಲಿನಲ್ಲಿ 49 ಕೋ.ರೂ.ಆಸ್ತಿ ತೆರಿಗೆ ಹಾಗೂ ಘನತ್ಯಾಜ್ಯ ವಿಲೇವಾರಿಯಿಂದ 13.50 ಕೋ.ರೂ. ಆದಾಯ ನಿರೀಕ್ಷಿಸಲಾಗಿದೆ. ನೀರಿನ ದರದಲ್ಲಿ 50 ಕೋ.ರೂ. ಮತ್ತು ಒಳಚರಂಡಿ ಅಭಿವೃದ್ಧಿ ಶುಲ್ಕವಾಗಿ 4 ಕೋ.ರೂ. ನಿರೀಕ್ಷಿಸಲಾಗಿದೆ.
ಅಭಿವೃದ್ಧಿ ಶುಲ್ಕು, ಪುರಅಭಿವೃದ್ಧಿ ಶುಲ್ಕ, ಪರಿಶೀಲನಾ ಶುಲ್ಕ ಹಸಿರು ಪೋಷಣಾರ್ಥ ಶುಲ್ಕ, ಪ್ರೀಮಿಯಂ ಎಫ್‌ಎಆರ್, ಕಾರ್ಮಿಕ ಕಲ್ಯಾಣ ನಿಧಿಯಿಂದ 3,157.90 ಲಕ್ಷ ರೂ. ನಿರೀಕ್ಷಿಸಲಾಗಿದೆ.
ಉದ್ದಿಮೆ ಪರವಾನಗಿ ಶುಲ್ಕವಾಗಿ 270 ಲಕ್ಷ ರೂ. ಮತ್ತು ವಾಹನ ನಿಲುಗಡೆ ಶುಲ್ಕ, ತಂಗುದಾಣ ಶುಲ್ಕ, ದಂಡಗಳಿಂದ 63 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ. ನಗರ ಪಾಲಿಕೆ ಆಸ್ತಿಗಳಾದ ವಾಣಿಜ್ಯ ಸಂಕೀರ್ಣ, ಕಟ್ಟಡ ಬಾಡಿಗೆ, ಪುರಭವನ ಬಾಡಿಗೆಯಿಂದ 468 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.
ಇತರ ತೆರಿಗೆಗಳಾದ ರಸ್ತೆ ಅಗೆತ, ಪುನ: ಸ್ಥಾಪನೆ ಶುಲ್ಕವಾಗಿ 4 ಕೋ.ರೂ., ಜನನ ಮರಣ ಪತ್ರಗಳ ಶುಲ್ಕ 15 ಲಕ್ಷ ರೂ., ಸಾವಯವ ಗೊಬ್ಬರ ಮಾರಾಟದಿಂದ 20 ಲಕ್ಷ ರೂ. ವಾಹನ ಉಪಕರಣ ಬಾಡಿಗೆಯಿಂದ 52 ಲಕ್ಷ ರೂ., ಹೂಡಿಕೆಗಳ ಮೇಲಿನ ಭಡ್ತಿ ಮತ್ತು ಬ್ಯಾಂಕ್ ಬಡ್ಡಿಗಳಿಂದ 825 ಲಕ್ಷ ರೂ. ಹಾಗು ಜಾಹಿರಾತು ತೆರಿಗೆಯಿಂದ 450 ಲಕ್ಷ ಆದಾಯ ನಿರೀಕ್ಷಿಸಲಾಗಿದೆ.
ರಾಜ್ಯ ಸರಕಾರದಿಂದ ಎಸ್‌ಎಫ್‌ಸಿ ನಿಧಿಯಡಿ ವೇತನ ಅನುದಾನವಾಗಿ 3,500 ಲಕ್ಷ ರೂ., ವಿದ್ಯುತ್ ಅನುದಾನವಾಗಿ 4270 ಲಕ್ಷ ರೂ., ಸ್ಟಾಂಪ್ ಶುಲ್ಕ ಸರ್‌ಜಾರ್ಜ್ 4 ಕೋ.ರೂ., ಎಸ್‌ಎಫ್‌ಸಿ ಮುಕ್ತನಿಧಿಯಡಿ 2,500 ಲಕ್ಷ ರೂ., ಎಸ್‌ಎಫ್‌ಸಿಯಡಿ ಅಭಾವ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗಾಹಿ 100 ಲಕ್ಷ ರೂ., ಬಿಡುಗಡೆಗೆ ಬಾಕಿಯಿರುವ ಮುಖ್ಯಮಂತ್ರಿಗಳ ವಿಶೇಷ ಅನುದಾನ ನಗರೋತ್ಥಾನ 2ನೆ ಹಂತದಡಿಯಲ್ಲಿ 4,000 ಲಕ್ಷ ರೂ ಮತ್ತು 3ನೆ ಹಂತದಡಿ 5,305 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಿಂದ ಅನುಷ್ಠಾನಗೊಳ್ಳಲಿರುವ ಅಮೃತ್ ಯೋಜನೆ ಮತ್ತು ಏಶಿಯನ್ ಡೆವಲಪ್‌ಮೆಂಟ ಬ್ಯಾಂಕ್ ಸಹಯೋಗದೊಂದಿಗೆ 2ನೆ ಹಂತ ಯೋಜನೆಗೆ 18,074 ಲಕ್ಷ ರೂ. ನಿರೀಕ್ಷಿಸಲಾಗಿದೆ.
ಹೊಸ ಯೋಜನೆಗಳು:
- ಕಾಗದ ರಹಿತ ಕಚೇರಿ (ಪೇಪರ್‌ಲೆಸ್) ಮತ್ತು 19 ಸೇವೆಗಳನ್ನು ಆನ್‌ಲೈನ್ ಮೂಲಕ ನೀಡಲು ಕಚೇರಿ ಕಂಪ್ಯೂಟರೀಕರಣ ಮತ್ತು ಆಧುನೀಕರಣಗಳಿಗೆ ಆಯವ್ಯಯದಲ್ಲಿ 150 ಲಕ್ಷ ರೂ. ಆದಾಯ ಕಾದಿರಿಸಲಾಗಿದೆ. ಎಪ್ರಿಲ್ 1ರಿಂದ ಇದು ಪ್ರಾರಂಭಗೊಳ್ಳಲಿದೆ.
- ಪಿವಿಎಸ್ ವೃತ್ತದಿಂದ ಲೇಡಿಹಿಲ್‌ವರೆಗೆ 4 ಪಥದ ರಸ್ತೆಯನ್ನು ಸ್ಮಾರ್ಟ್ ರೋಡ್ ಆಗಿ ಅಭಿವೃದ್ಧಿಪಡಿಸಲು 2 ಕೋ.ರೂ. ಅನುದಾನ ಮೀಸಲಿಡಲಾಗಿದೆ.
- ಮನಪಾ ಪ್ರಮುಖ ರಸ್ತೆಗಳಿಗೆ ನಾಮಫಲಕಗಳನ್ನು ಅಳವಡಿಸಲು 150 ಲಕ್ಷ ರೂ. ಕಾದಿರಿಸಲಾಗಿದೆ.
- ಮಂಗಳೂರು ಮಹಾನಗ ಬಯಲು ಮಲ ವಿಸರ್ಜನೆ ಮುಕ್ತ ನಗರವನ್ನಾಗಿ ಕೇಂದ್ರ ಸರಕಾರ ಪರಿಣತರ ತಂಡ ಸಮೀಕ್ಷೆ ನಡೆಸಿ ಘೋಷಿಸಿದೆ. ಅದರಂತೆ ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಪ್ರಮುಖ ಜನಸಂದಣಿ ಇರುವ ಪ್ರದೇಶಗಳಲ್ಲಿ 'ಇ-ಶೌಚಾಲಯ'ಗಳನ್ನು ಸಿಎಸ್‌ಆರ್ ನಿಧಿ ಮತ್ತು ಇತರ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ನಿರ್ಮಿಸಲು ಉದ್ದೇಶಿಸಲಾಗಿದೆ.
- ಮನಪಾದ ಎಲ್ಲ ಕಟ್ಟಡಗಳು, ಖಾಲಿ ನಿವೇಶನಗಳನ್ನು ಆಸ್ತಿ ತೆರಿಗೆ ಪರಿಮಿತಿಯೊಳಗೆ ತರುವ ಉದ್ದೇಶದಿಂದ ಜಿಪಿಎಸ್ ಆಧಾರಿತ ಸಮೀಕ್ಷೆ ಕಾರ್ಯ ನಡೆಸಲಾಗುವುದು.
- ನೀರಿನ ಶುಲ್ಕ ಸಂಗ್ರಹಣೆಯಲ್ಲಾಗುವ ಸೋರಿಕೆ ತಪ್ಪಿಸಲು ನೀರಿನ ಸಂಪರ್ಕಗಳನ್ನು ಕಟ್ಟಡಗಳ ಆಸ್ತಿಯೊಂದಿಗೆ ಸಮೀಕ್ಷೆ ಮಾಡಲು ಕ್ರಮ ಜರಗಿಸಲಾಗಿದೆ.
- ನಗರಗಳ ಹಸಿರೀಕರಣಕ್ಕೆ ನಗರ ಅರಣ್ಯ ಮತ್ತು ತೋಟಗಾರಿಕಾ ಘಟಕವನ್ನು ಅರಣ್ಯ ಮತ್ತು ತೋಟಗಾರಿಕಾ ಇಲಾಖೆಯ ಸಹಯೋಗದಿಂದ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಆ ಮೂಲಕ ಮನಪಾ ವ್ಯಾಪ್ತಿಯ ಎಲ್ಲ ಪಾರ್ಕ್‌ಗಳ ಮತ್ತು ಸಾರ್ವಜನಿಕ ಪ್ರದೇಶಗಳ ಅಭಿವೃದ್ಧಿಗೆ 300 ಲಕ್ಷ ರೂ. ಕಾದಿರಿಸಲಾಗಿದೆ.
- ಮನಪಾ ವ್ಯಾಪ್ತಿಯ ಪ್ರಮುಖ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಲು 100 ಲಕ್ಷ ರೂ. ಅನುದಾನ ಕಾದಿರಿಸಲಾಗಿದೆ.
- ಉದ್ದಿಮೆ ಪರವಾನಿಗ ನೀಡುವಾಗ ಉದ್ದಿಮೆ ಶುಲಕದ ಮೇಲೆ ಗಾರ್‌ಬೇಜ್ ವಿಧಿಸುವುದರಿಂದ ವಾರ್ಷಿಕ 307 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.
- ಒಳಚರಂಡಿ ಸೆಸ್‌ಗಳಿಂದ 500 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.
- ರಸ್ತೆಗಳನ್ನು ಅಗೆದು ಕಂಪೆನಿಗಳು ಕೇಬಲ್‌ಗಳನ್ನು ಅಳವಡಿಸುತ್ತಿದೆ. ಅದಕ್ಕಾಗಿ ನೆಲಬಾಡಿಗೆ (ಅಂಡರ್‌ಗ್ರೌಂಡ್ ಕೇಬಲ್ ಸೆಸ್)ಯಾಗಿ 4 ಕೋ.ರೂ. ಆದಾಯ ನಿರೀಕ್ಷಿಸಲಾಗಿದೆ.
- ಮನಪಾ ವ್ಯಾಪ್ತಿಯ ಹಳೆಯ ಮಾರುಕಟ್ಟೆಗಳ ಪುನ: ನಿರ್ಮಾಣಕ್ಕಾಗಿ ನಗರಾಭಿವೃದ್ಧಿ ಪ್ರಾಧಿಕಾರದೊಂದಿಗೆ ಉರ್ವ, ಕದ್ರಿ, ಕಂಕನಾಡಿ, ಕಾವೂರು, ಅಳಪೆ, ಬಿಕರ್ನಕಟ್ಟೆ, ಕೃಷ್ಣಾಪುರ, ಕಾಟಿಪಳ್ಳ, ಕೈಕಂಬ, ಸುರತ್ಕಲ್ ಮಾರುಕಟ್ಟೆಯ ನಿರ್ಮಾಣಕ್ಕಾಗಿ ಉದ್ದಿಮೆ ನಿಧಿಯಿಂದ ಅನುದಾನ ಕಾದಿರಿಸಲಾಗುವುದು.
- ನಿರುಪಯುಕ್ತ ಕಟ್ಟಡ ಸಾಮಗ್ರಿಗಳ ವಿಲೇವಾರಿಗಾಗಿ ಕುಂಜತ್ತಬೈಲ್‌ನಲ್ಲಿ ಪ್ರತ್ಯೇಕ ಸ್ಥಳ ಗುರುತಿಸಲಾಗಿದೆ. ಪಚ್ಚನಾಡಿ ಘನತ್ಯಾಜ್ಯ ಘಟಕದ ಪಕ್ಕದ 10 ಎಕರೆ ಖಾಸಗಿ ಜಮೀನನ್ನು ಭೂಸ್ವಾಧೀನ ಮೂಲಕ ಖರೀದಿಸಲು 14ನೆ ಹಣಕಾಸು ಯೋಜನೆಯಲ್ಲಿ ಕ್ರಮ ವಹಿಸಲಾಗಿದೆ.
- ಮನಪಾದ 32 ಪೌರಕಾರ್ಮಿಕರಿಗೆ ಱಪೌರಕಾರ್ಮಿಕ ಗೃಹಭಾಗ್ಯ ಯೋಜನೆೞಯಡಿ 240 ಲಕ್ಷ ರೂ.ವೆಚ್ಚದಲ್ಲಿ ಜಿ ಪ್ಲಸ್ 3 ಮಾದರಿಯ ಗೃಹ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ.
- ಕೇಂದ್ರ ಪುರಸ್ಕೃತ ಯೋಜನೆಯಾದ ಹೌಸಿಂಗ್ ಫಾರ್ ಆಲ್ ಕಾರ್ಯಕ್ರಮದಡಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 1,200 ಮತ್ತು ಉತ್ತರ ಕ್ಷೇತ್ರದಲ್ಲಿ 900 ಮನೆಗಳನ್ನು ವಿತರಿಸಲು ಫಲಾನುಭವಿಗಳನ್ನು ಗುರುತಿಸಲಾಗಿದೆ.







