ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ರಾಜಸ್ಥಾನ ಬಿಜೆಪಿ ಶಾಸಕಿಯ ಪತಿ

ಕೋಟಾ,ಫೆ.21: ಸಂಚಾರ ನಿಯಮಗಳ ಉಲ್ಲಂಘನೆಗಾಗಿ ತನ್ನ ಬೆಂಬಲಿಗನಿಗೆ ದಂಡ ವಿಧಿಸಿದ್ದಕ್ಕಾಗಿ ರಾಜಸ್ಥಾನದ ಆಡಳಿತ ಬಿಜೆಪಿ ಶಾಸಕಿಯ ಪತಿ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಘಟನೆ ವೀಡಿಯೊ ಕ್ಯಾಮರಾದಲ್ಲಿ ದಾಖಲಾಗಿದ್ದು, ಈ ಘಟನೆ ಬಿಜೆಪಿ ಸರಕಾರವನ್ನು ಮುಜುಗರಕ್ಕೆ ಸಿಲುಕಿಸಿದೆ.
ಶಾಸಕಿ ಚಂದ್ರಕಾಂತಾ ಮೇಘ್ವಾಲ್‌ರ ಪತಿ ನರೇಶ ಮೇಘ್ವಾಲ್ ಅವರು ತನ್ನ ಬೆಂಬಲಿಗರೊಂದಿಗೆ ಪೊಲೀಸ್ ಠಾಣೆಗೆ ನುಗ್ಗಿ, ಬಿಜೆಪಿ ಕಾರ್ಯಕರ್ತನಿಗೆ ಸಂಚಾರ ನಿಯಮಗಳ ಉಲ್ಲಂಘನೆಗಾಗಿ ಭಾರೀದಂಡವನ್ನು ವಿಧಿಸಿರುವುದನ್ನು ಪ್ರಶ್ನಿಸಿ ಜಗಳಕ್ಕಿಳಿದಿದ್ದರು ಎಂದು ವರದಿಗಳು ತಿಳಿಸಿವೆ. ಮೇಘ್ವಾಲ್ ಮತ್ತು ಬೆಂಬಲಿಗರು ಠಾಣೆಯಲ್ಲಿ ನಡೆಸಿದ್ದ ದಾಂಧಲೆ ಮತ್ತು ನಾಲ್ವರು ಪೊಲೀಸರಿಗೆ ಥಳಿಸಿದ್ದು ಕ್ಯಾಮರಾದಲ್ಲಿ ದಾಖಲಾಗಿದೆ.
ಮೇಘ್ವಾಲ ಪೊಲಿಸ್ ಅಧಿಕಾರಿಗೆ ತಪರಾಕಿ ನೀಡಿದ್ದು ಮತ್ತು ಇದರಿಂದ ಕೆರಳಿದ ಪೊಲಿಸರು ಅವರ ಬೆಂಬಲಿಗರ ವಿರುದ್ಧ ಲಾಠಿಗಳನ್ನು ಬಳಸಿದ್ದ ದೃಶ್ಯ ವೀಡಿಯೊ ಫೂಟೇಜ್‌ನಲ್ಲಿದೆ. ಪರಿಸ್ಥಿತಿ ಕೈಮೀರಿದಾಗ ಮೇಘ್ವಾಲ್ ಬೆಂಬಲಿಗರು ಪ್ರತೀಕಾರವಾಗಿ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯ ಬಳಿಕ ಪೆಟ್ಟು ತಿಂದಿರುವ ನಾಲ್ವರು ಪೊಲೀಸರನ್ನು ವರ್ಗಾವಣೆಗೊಳಿಸಲಾಗಿದೆ. ಮೇಘ್ವಾಲ್ ಮತ್ತು ಅವರ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಾಗಿದೆ.
ತನ್ನ ಪತಿಯನ್ನು ಸಮರ್ಥಿಸಿಕೊಂಡಿರುವ ಶಾಸಕಿ ಚಂದ್ರಕಾಂತಾ ಪೊಲೀಸರು ನರೇಶ ಮತ್ತು ಬೆಂಬಲಿಗರನ್ನು ಥಳಿಸಿ ಅಕ್ರಮ ಬಂಧನದಲ್ಲಿರಿಸಿದ್ದರು. ಜಗಳದಲ್ಲಿ ತನ್ನ ಸೀರೆ ಹರಿದಿದ್ದು,ಬಳೆಗಳು ಒಡೆದಿವೆ ಎಂದು ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಮತ್ತು ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಕೋಟಾ ಎಸ್‌ಪಿ ಸವಾಯ್ ಸಿಂಗ್ ಗೋದಾರ ತಿಳಿಸಿದರು.