ಬಂಟ್ವಾಳ: ಪಿಗ್ಮಿ ಸಂಗ್ರಾಹಕಿ ನೇಣಿಗೆ ಶರಣು

ಬಂಟ್ವಾಳ, ಫೆ. 21: ಮೂಡುಬಿದ್ರೆ ರಸ್ತೆ ನಡುವಿನ ಸೋರ್ಣಾಡು ಎಂಬಲ್ಲಿ ಪಿಗ್ಮಿ ಸಂಗ್ರಾಹಕಿಯೊಬ್ಬರು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.
ಮೃತರನ್ನು ಇಲ್ಲಿನ ನಿವಾಸಿ ಪಿಕಪ್ ವಾಹನ ಚಾಲಕ ವಿಶ್ವನಾಥ ಕುಲಾಲ್ ಎಂಬವರ ಪತ್ನಿ ಶೈಲಜಾ ಕುಲಾಲ್(47) ಎಂದು ಗುರುತಿಸಲಾಗಿದೆ.
ಹಲವು ವರ್ಷಗಳಿಂದ ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಪಿಗ್ಮಿ ಸಂಗ್ರಾಹಕಿಯಾಗಿ ದುಡಿಯುತ್ತಿದ್ದ ಶೈಲಜಾ ಮಂಗಳವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿರಲಿಲ್ಲ ಎನ್ನಲಾಗಿದೆ.
ಇವರ ಇಬ್ಬರು ಪುತ್ರಿಯರ ಪೈಕಿ ಒಬ್ಬರು ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದರೆ, ಇನ್ನೊಬ್ಬರು ಸೋಮವಾರವಷ್ಟೇ ಬೆಂಗಳೂರಿಗೆ ಉದ್ಯೋಗ ಹಿನ್ನೆಲೆಯಲ್ಲಿ ತೆಳಿದ್ದರು ಎನ್ನಲಾಗಿದೆ.
ಮೃತರ ಪತಿ ವಿಶ್ವನಾಥ ಕುಲಾಲ್ ಅವರು ಸಂಜೆ ಮನೆಗೆ ಬಂದು ನೋಡಿದಾಗಲೇ ಪತ್ನಿ ಮನೆಯ ಶೌಚಾಲಯದಲ್ಲಿ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ.
ಕಳೆದ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಶೈಲಜಾ ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದರು ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.







