ಪುತ್ತೂರು: ತುಳು ಸಂಸ್ಕೃತಿಯನ್ನು ನಡೆ ನುಡಿಯಲ್ಲಿ ಅಳವಡಿಸಲು ಕ್ರಾಸ್ತಾ ಕರೆ
ಫೀಲೋ ಪಂಥೊ ಅಂತರ್ ಕಾಲೇಜು ತುಳು ಜಾನಪದ ಸ್ಪಧೋತ್ಸವ

ಪುತ್ತೂರು, ಫೆ.21: ನಮ್ಮ ತುಳು ನಾಡಿನ ಜಾನಪದ ಸಂಸ್ಕೃತಿ ಅತ್ಯಂತ ವೈಶಿಷ್ಟ್ಯಪೂರ್ಣವಾಗಿದ್ದರೂ ಜಾಗತೀಕರಣದ ಪ್ರಭಾವಕ್ಕೊಳಗಾಗಿ ನಾವೆಲ್ಲರೂ ಇಂದು ವಿದೇಶಿ ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಿದ್ದೇವೆ. ಇಂತಹ ಸನ್ನಿವೇಶದಲ್ಲಿ ನಾಡಿನ ಶ್ರೀಮಂತ ಸಂಸ್ಕೃತಿಯನ್ನು ಗೌರವ ಭಾವನೆಯಿಂದ ಕಾಣುವ ಜತೆಗೆ ನಮ್ಮ ನಡೆ ನುಡಿಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಯುವಜನತೆ ವಹಿಸುವ ಅಗತ್ಯವಿದೆ ಎಂದು ಮೂಡಬಿದ್ರಿಯ ಸಂಪಿಗೆ ಇಗರ್ಜಿಯ ಧರ್ಮಗುರು ಅಪೋಲಿನರಿಸ್ ಕ್ರಾಸ್ತಾ ಅವರು ಹೇಳಿದರು.
ಅವರು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಮಾನವಿಕ ಸಂಘದ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಹಕಾರದೊಂದಿಗೆ ಮಂಗಳವಾರ ಕಾಲೇಜಿನ ಎಸ್‌ಜೆಎಮ್ ಸಭಾಂಗಣದಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ‘ಫೀಲೋ ಪಂಥೊ 2017ಅಂತರ್ ಕಾಲೇಜು ತುಳು ಜಾನಪದ ಸ್ಪಧೋತ್ಸವ'ವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಸಂಚಾಲಕ ಆಲ್ಫ್ರೆಡ್.ಜೆ.ಪಿಂಟೋ ಅವರು ಭತ್ತ ತುಂಬಿದ ಕಳಸೆಯಲ್ಲಿ ಸಿಂಗಾರವನ್ನು ಅರಳಿಸಿ, ಸ್ಪರ್ಧೋತ್ಸವಕ್ಕೆ ಚಾಲನೆ ನೀಡಿ ಬಳಿಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ನಮ್ಮ ತುಳು ನಾಡು ವಿವಿಧ ಜಾತಿ ಮತ ಪಂಥಗಳ ಜನರನ್ನು ಒಳಗೊಂಡಿದೆ. ಇಲ್ಲಿರುವ ಜನರೆಲ್ಲರೂ ಒಂದೇ ತುಳು ಮಾತೆಯ ಮಕ್ಕಳಂತೆ ಪರಸ್ಪರ ಅನ್ಯೋನ್ಯತೆಯಿಂದ ಕೂಡಿದ್ದಾರೆ. ತುಳು ಭಾಷೆ ರಾಷ್ಟ್ರ ಮಟ್ಟದಲ್ಲಿಯೂ ಮನ್ನಣೆ ಪಡೆದಿರುವುದು ಸಂತೋಷದ ವಿಷಯವಾಗಿದೆ ಎಂದು ಅವರು ಹೇಳಿದರು.
ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಅವರು ಮಾತನಾಡಿ, ವಿದೇಶಿ ಸಂಸ್ಕೃತಿಯ ಕಡೆಗೆ ಒಲವು ತೋರುವ ನಾವು ಅತ್ಯಂತ ಮೌಲ್ಯಯುತವಾದ ಸ್ವದೇಶಿ ಸಂಸ್ಕೃತಿಯ ಮೌಲ್ಯಗಳನ್ನು ಅರಿತುಕೊಂಡು ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಯೋ ನೊರೋನ್ಹ ,ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷೆ ಪಿ. ಲತಾ ಗಣೇಶ್ ರಾವ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ವಿಷ್ಣು ಭಟ್, ಸ್ಪಧೋತ್ಸವದ ತೀರ್ಪುಗಾರ ರಮೇಶ್ ಉಳಯ ಮತ್ತಿತರರು ಇದ್ದರು. ಮಾನವಿಕ ಸಂಘದ ಸಂಯೋಜಕ ಪ್ರೊ. ಸುಬೇರ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವಿದ್ಯಾರ್ಥಿ ಸಂಯೋಜಕ ರಾಕೇಶ್ ರಾವ್ ಪಿ. ಜಿ. ಸ್ವಾಗತಿಸಿದರು. ಅಂಕಿತ ವಂದಿಸಿದರು. ವಿದ್ಯಾರ್ಥಿ ಸಹಸಂಯೋಜಕಿ ಅಕ್ಷತಾ ಶರ್ಮ ವಿ ಕಾರ್ಯಕ್ರಮ ನಿರೂಪಿಸಿದರು.
ತುಳು ಪಾಡ್ದನ, ‘ಕಂಬಳ ಬೋಡು-ಬೊಡ್ಚಿ' ಎಂಬ ವಿಷಯದ ಕುರಿತು ತುಳು ಚರ್ಚೆ, ಮುಂಡಾಸು ಕಟ್ಟುವುದು, ದಾರ ರಹಿತ ಹೂಮಾಲೆ ಕಟ್ಟುವುದು, ಸ್ಮರಣ ಶಕ್ತಿ, ಸೋಬಾನೆ, ಜಾನಪದ ಸಮೂಹ ನೃತ್ಯ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.







