‘ಬೀಬಿ ಕಾ ಮಖಬರಾ’ ಮಸೀದಿಯಲ್ಲಿ ಪ್ರಾರ್ಥನೆಗೆ ಮೊಗಲ್ ವಂಶಜನ ಆಗ್ರಹ

ಔರಂಗಾಬಾದ್,ಫೆ.21: ಇಲ್ಲಿನ ಬೀಬಿ ಕಾ ಮಖಬರಾ (ಸಮಾಧಿ)ದ ಆವರಣದಲ್ಲಿರುವ ಐತಿಹಾಸಿಕ ಮಸೀದಿಯಲ್ಲಿ ನಿಯಮಿತವಾಗಿ ಪ್ರಾರ್ಥನೆಯನ್ನು ಸಲ್ಲಿಸಲು ಅವಕಾಶ ನೀಡಬೇಕೆಂದು, ಕೊನೆಯ ಮೊಗಲ್ ದೊರೆ ಬಹಾದೂರ್ ಶಾ ಝಫರ್ ಅವರ ಮರಿಮೊಮ್ಮಗ ಯಾಕೂಬ್ ಹಬೀಬುದ್ದೀನ್ ಟುಸಿ ಮಂಗಳವಾರ ಆಗ್ರಹಿಸಿದ್ದಾರೆ.
‘‘ ಮಖಬರಾದ ಆವರಣದಲ್ಲಿರುವ ಮಸೀದಿಯು ಮುಚ್ಚಲ್ಪಟ್ಟಿದೆ ಹಾಗೂ ಇಲ್ಲಿ ಪ್ರಾರ್ಥನೆಗಳನ್ನು ನಡೆಸಲು ಅವಕಾಶ ನೀಡಲಾಗುತ್ತಿಲ್ಲ. ಇದು ಸಂವಿಧಾನವು ಖಾತರಿಪಡಿಸಿದ ಮೂಲಭೂತ ಧಾರ್ಮಿಕ ಸ್ವಾತಂತ್ರಕ್ಕೆ ವಿರುದ್ಧವಾದುದಾಗಿದೆ’’ ಎಂದವರು ಹೇಳಿದ್ದಾರೆ.
ಐತಿಹಾಸಿಕ ತಾಜ್‌ಮಹಲ್ ಪಕ್ಕದ ಮಸೀದಿಯಲ್ಲಿ ವರ್ಷವಿಡೀ ಪ್ರಾರ್ಥನೆಗಳನ್ನು ಸಲ್ಲಿಸಲು ಅವಕಾಶವಿದೆಯಾದರೆ, ತಾಜ್‌ಮಹಲ್‌ನ ಪ್ರತಿಕೃತಿಯಂತಿರುವ ಮಖಬರಾದ ಆವರಣದಲ್ಲಿನ ಮಸೀದಿಯಲ್ಲಿ ಯಾಕಿಲ್ಲ? ಎಂದು ಈ ಸ್ಥಳದ ಪಾಲಕರಾದ ಟುಸಿ ಪ್ರಶ್ನಿಸುತ್ತಾರೆ.
ಮೊಗಲ್ ಚಕ್ರವರ್ತಿ ಔರಂಗಜೇಬ್, ತನ್ನ ಮೊದಲ ಪತ್ನಿಯಾದ ದಿಲ್‌ರಾಸ್ ಬಾನು ಬೇಗಂನ ನೆನಪಿಗಾಗಿ ಬೀಬಿ ಕಾ ಮಖಬರಾವನ್ನು ನಿರ್ಮಿಸಿದ್ದನು.
ಮಖಬರಾ ಆವರಣದಲ್ಲಿರುವ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಬೇಕೆಂದು ಕೋರಿ ತಾನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ ಅಧೀಕ್ಷಕರಿಗೆ ಮನವಿಯೊಂದನ್ನು ಸಲ್ಲಿಸಿರುವುದಾಗಿ ಟುಸಿ ತಿಳಿಸಿದ್ದಾರೆ.
‘‘ಮಸೀದಿಯಲ್ಲಿ ಕನಿಷ್ಠ ಮೂರು ಪ್ರಾರ್ಥನೆಗಳನ್ನು ಸಲ್ಲಿಸಲು ಅನುಮತಿ ನೀಡಬೇಕಾಗಿದೆ. ಇದೇ ವೇಳೆ ಭಿತ್ತಿಪತ್ರಗಳನ್ನು ಹಚ್ಚಿ ಮಸೀದಿಯನ್ನು ವಿರೂ ಗೊಳಿಸಲಾಗಿದ್ದು, ಅದರ ಪರಿಸ್ಥಿತಿ ದಿನದಿಂದ ದಿನಕ್ಕೆ ಶೋಚನೀಯವಾಗುತ್ತಿದೆಯೆಂದವರು ಹೇಳಿದ್ದಾರೆ.ಮಸೀದಿಯನ್ನು ಸುಸ್ಥಿತಿಯಲ್ಲಿಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದವರು ಆಗ್ರಹಿಸಿದ್ದಾರೆ.







