ಡುಟರ್ಟ್ ಸರಣಿ ಹಂತಕ :ಫಿಲಿಪ್ಪೀನ್ಸ್ ಸಂಸದೆ ಆರೋಪ

ಮನಿಲಾ (ಫಿಲಿಪ್ಪೀನ್ಸ್), ಫೆ. 21: ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಓರ್ವ ‘ಸರಣಿ ಹಂತಕ’, ಹಾಗಾಗಿ ಅವರನ್ನು ಅಧಿಕಾರದಿಂದ ಹೊರಗಟ್ಟಬೇಕು ಎಂದು ಅವರ ಟೀಕಾಕಾರೆ ಸೆನೆಟರ್ ಲೈಲಾ ಡಿ ಲಿಮಾ ಮಂಗಳವಾರ ಹೇಳಿದ್ದಾರೆ.
ಅವರ ವಿರುದ್ಧ ಮಾದಕ ಪದಾರ್ಥ ಹೊಂದಿದ ಆರೋಪ ದಾಖಲಿಸಲಾಗಿದ್ದು, ಬಂಧನವನ್ನು ಎದುರಿಸುತ್ತಿದ್ದಾರೆ. ಆದರೆ, ತನ್ನ ಬಾಯಿ ಮುಚ್ಚಿಸುವುದಕ್ಕಾಗಿ ತನ್ನ ವಿರುದ್ಧ ಸುಳ್ಳು ಮೊಕದ್ದಮೆಯನ್ನು ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಡುಟರ್ಟ್ ಮತ್ತು ಅವರ ತಥಾಕಥಿತ ಮಾದಕ ದ್ರವ್ಯದ ವಿರುದ್ಧದ ಸಮರವನ್ನು ಟೀಕಿಸಿರುವ ಲೈಲಾ, ಮೂರು ದಶಕಗಳ ಹಿಂದೆ ಸರ್ವಾಧಿಕಾರಿ ಮಾರ್ಕೊಸ್ ಫರ್ಡಿನಾಂಡ್ ಅವರನ್ನು ಉರುಳಿಸಿದ ಪ್ರಸಿದ್ಧ ‘ಜನ ಶಕ್ತಿ’ ಕ್ರಾಂತಿಯನ್ನು ಉಲ್ಲೇಖಿಸಿದ್ದಾರೆ.
‘‘ನಮ್ಮ ಅಧ್ಯಕ್ಷ ಓರ್ವ ಕೊಲೆಗಡುಕ ಹಾಗೂ ಮಾನಸಿಕ ಅಸ್ವಸ್ಥ ಸರಣಿ ಕೊಲೆಗಾರ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಡೀ ಲಿಮಾ ಹೇಳಿದರು.
ದೇಶವನ್ನು ಮುನ್ನಡೆಸಲು ಡುಟರ್ಟ್ ಅಸಮರ್ಥ ಎಂಬುದಾಗಿ ಘೋಷಿಸುವಂತೆ ಅವರು ಸಚಿವ ಸಂಪುಟಕ್ಕೆ ಕರೆ ನೀಡಿದರು ಹಾಗೂ ಅವರ ಆಡಳಿತಕ್ಕೆ ವಿರೋಧ ವ್ಯಕ್ತಪಡಿಸುವಂತೆ ಜನರಿಗೆ ಮನವಿ ಮಾಡಿದರು.
ಡುಟರ್ಟ್‌ರ ಮಾದಕ ದ್ರವ್ಯದ ವಿರುದ್ಧದ ಸಮರದಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ.







