ಮಂಗಳೂರು: ಎ.ಜೆ. ಆಸ್ಪತ್ರೆಯಲ್ಲಿ ಮೊದಲ ಬಾರಿ ಹೃದಯದಾನ

ಮಂಗಳೂರು, ಫೆ. 21: ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಏಟು ತಗುಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನೋರ್ವನ ಹೃದಯವನ್ನು ಕುಟುಂಬಸ್ಥರು ಎ.ಜೆ. ಆಸ್ಪತ್ರೆಗೆ ದಾನ ಮಾಡಿದ್ದಾರೆ. ಮೆದುಳು ನಿಷ್ಕ್ರಿಯಗೊಂಡ ಯುವಕನ ಹೃದಯವನ್ನು ಮೊದಲ ಬಾರಿಗೆ ದಾನವಾಗಿ ಪಡೆಯಲಾಗಿದೆ.
28 ವರ್ಷದ ಸತೀಶ್ ಅವರು ಫೆ.18ರಂದು ರಾತ್ರಿ 10 ಗಂಟೆ ಸುಮಾರಿಗೆ ಕಾರ್ಕಳ ಬೈಪಾಸ್ ರಸ್ತೆಯಲ್ಲಿ ರಸ್ತೆ ಸಂಚಾರ ಅಪಘಾತಕ್ಕೆ ತುತ್ತಾಗಿದ್ದರು. ಅವರನ್ನು ಕಾರ್ಕಳದ ಸಿಟಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.
ಫೆ. 19ರ ಮುಂಜಾನೆ 3 ಗಂಟೆಗೆ ಮಂಗಳೂರಿಗೆ ಕರೆತಂದು ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ದಾಖಲಿಸಲಾಯಿತು. ಅಪಘಾತದಲ್ಲಿ ಅವರಿಗೆ ತಲೆಗೆ ಹೆಚ್ಚಿನ ಗಾಯಗಳಾಗಿದ್ದವು. ಫೆ. 20ರಂದು ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸಿದರು.
ಸತೀಶ್ ಮೂಡುಬಿದ್ರೆಯ ಪಡುಮಾರ್ನಾಡಿನ ನಿವಾಸಿ. ಅವರ ತಂದೆ ರಾಘವ ಆಚಾರ್ (63) ಬಡಗಿ ವೃತ್ತಿಯವರು. ತಾಯಿ ಸುಲೋಚನಾ ಗೃಹಿಣಿ. ಸತೀಶ್ ಅವರಿಗೆ ಇಬ್ಬರು ಸಹೋದರರು. ರಾಜೇಶ್ (31) ವೃತ್ತಿಯಲ್ಲಿ ಬಡಗಿಯಾದರೆ, ಮುಖೇಶ್ (29) ಅಕ್ಕಸಾಲಿಗ. ಸತೀಶ್ ಅವರು ಸಹ ಬಡಗಿ ವೃತ್ತಿ ಮಾಡಿಕೊಂಡಿದ್ದರು.
ಇವರ ಅಂಗಾಂಗಗಳನ್ನು ದಾನ ಮಾಡಬೇಕೆಂದು ಆತನ ಕುಟುಂಬದವರ ಆಸೆಯಾಗಿತ್ತು. ಇದನ್ನರಿತ ಎ.ಜೆ.ಆಸ್ಪತ್ರೆಯ ಸಿಬ್ಬಂದಿಗಳು ತ್ವರಿತವಾಗಿ ಝೋನಲ್ ಕೋರ್ಡಿನೇಶನ್‌ಕಮಿಟಿ ಆಫ್ ಕರ್ನಾಟಕ ಫಾರ್ ಟ್ರಾನ್ಸ್‌ಪ್ಲಾಂಟೆಶನ್ (ಝೆಡ್‌ಸಿಸಿಕೆ) ಸಂಸ್ಥೆಯನ್ನು ಸಂಪರ್ಕಿಸಿದರು.
ಸಂಸ್ಥೆಯವರು ಅಂಗಾಂಗ ಕಸಿಗೆ ಅಗತ್ಯವಿರುವ ಕಾನೂನು ಪರವಾನಗಿಗಳನ್ನು ಮತ್ತು ಅಂಗಾಂಗ ಸ್ವೀಕರಿಸುವವರ ಪಟ್ಟಿಯನ್ನು ತಯಾರಿಸಿದರು. ಕಾನೂನು ಪರವಾನಗಿಯ ನಂತರ ಅಂಗಾಂಗಗಳ ಕಸಿಯನ್ನು ಮಾಡುವ ವೈದ್ಯರ ತಂಡವು ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿತು.
ದಾನಿಯಿಂದ ಪಡೆದ ಅಂಗಾಂಗಗಳನ್ನು ಝೆಡ್‌ಸಿಸಿಕೆಯವರ ನಿರ್ದೇಶನದ ಮೇಲೆ ದಾನ ಮಾಡಲಾಯಿತು. ಮೊತ್ತಮೊದಲ ಬಾರಿಗೆ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ದಾನಿ ಹೃದಯವನ್ನು ಪಡೆಯಲಾಗಿದೆ.
ಹೃದಯವನ್ನು ಬೆಂಗಳೂರಿನ ಎಂ. ಎಸ್.ರಾಮಯ್ಯ ಆಸ್ಪತ್ರೆಗೆ, ಲಿವರನ್ನು ಬೆಂಗಳೂರಿನ ಮಣಿಪಾಲ್‌ಆಸ್ಪತ್ರೆ, ಕಿಡ್ನಿಗಳನ್ನು ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲ ಮತ್ತು ಎ. ಜೆ. ಆಸ್ಪತ್ರೆಯ ರೋಗಿಗಳಿಗೆ ಕಸಿ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.







