ಸ್ಪರ್ಧಾತ್ಮಕ ಚಟುವಟಿಕೆಯು ಜ್ಞಾನ ಕೌಶಲವನ್ನು ವೃದ್ದಿಸುತ್ತದೆ: ಮಹಮ್ಮದ್ ನಝೀರ್
ಪಿ.ಎ.ಕಾಲೇಜಿನಲ್ಲಿ ‘ಟೆಕ್ನಾಥಾನ್-2017' ಸಮಾರೋಪ

ಕೊಣಾಜೆ, ಫೆ.21: ಇಂದಿನ ಆಧುನಿಕ ತಂತ್ರಜ್ಞಾನದ ಯುಗವಾದ ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆಗಳು ಹುಟ್ಟಿಕೊಂಡಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂತಹ ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರೊಂದಿಗೆ ತಮ್ಮ ಜ್ಞಾನ, ಕೌಶಲವನ್ನು ವೃದ್ಧಿಸಿಕೊಂಡು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದು ಮಂಗಳೂರು ನಗರಪಾಲಿಕೆ ಆಯುಕ್ತ ಮಹಮ್ಮದ್ ನಝೀರ್ ಅವರು ಅಭಿಪ್ರಾಯ ಪಟ್ಟರು.
ಅವರು ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ರಾಷ್ಟ್ರಮಟ್ಟದ ಅಂತರ್ ಕಾಲೇಜು ಟೆಕ್ನಿಕಲ್ ಫೆಸ್ಟ್ ‘ಟೆಕ್ನಥಾನ್-2017' ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಇಂದು ನಾವು ಅಭಿವೃದ್ದಿಯತ್ತ ಹೆಜ್ಜೆ ಇಡುತ್ತಿದ್ದು, ಮಂಗಳೂರು ಕೂಡಾ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಔದ್ಯೋಗಿಕ ಸ್ಪರ್ಧೆಗಳಲ್ಲಿ ನಾವು ಯಶಸ್ವಿಯಾಗಬೇಕಾದರೆ ವಿದ್ಯಾರ್ಥಿ ಜೀವನದಲ್ಲೇ ನಾವು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಅಬ್ದುಲ್ ಶರೀಫ್ ಅವರು, ಸಾಂಸ್ಕೃತಿಕ ಸ್ಪರ್ಧೆಗಳಿಗೆ ಮಹತ್ವ ಕೊಡುವಂತೆ ವಿದ್ಯಾರ್ಥಿಗಳು ಇಂತಹ ಟೆಕ್ನಿಕಲ್ ಸ್ಪರ್ಧೆಗಳಿಗೂ ಪ್ರಾಮುಖ್ಯತೆ ನೀಡಬೇಕಿದೆ. ಇಂತಹ ಸ್ಪರ್ಧೆಗಳು ನಮ್ಮಲ್ಲಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ಜ್ಞಾನವನ್ನು ವೃದ್ದಿಸಿ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ವಾಟ್ಸಪ್, ಪೇಸುಬುಕ್ ಮುಂತಾದವುಗಳ ದಾಸರಾಗುತ್ತಿದ್ದಾರೆ. ತಮ್ಮ ಜ್ಞಾನದ ಅಗತ್ಯತೆಗೆ ಬೇಕಾದಷ್ಟು ಮಾತ್ರ ನಾವು ಸಾಮಾಜಿಕ ಜಾಲತಾಣಗಳನ್ನು ಬಳಸಿ ಉಳಿದ ಸಮಯವನ್ನು ಓದುವಿಕೆಗೆ ಮೀಸಲಿಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪಿ.ಎ.ಕಾಲೇಜು ಆಡಳಿತಾಧಿಕಾರಿ ಕೆ.ಎಂ.ಹನೀಫ್, ಉಪಪ್ರಾಂಶುಪಾಲ ಡಾ.ರಮೀರ್ ಎಂ.ಕೆ, ಶೈಕ್ಷಣಿಕ ಆಡಳಿತಾತ್ಮಕ ನಿರ್ದೇಶಕ ಡಾ.ಸರ್ಫ್‌ರಾರ್ ಹಾಸಿಂ, ಕಾರ್ಯಕ್ರಮ ಸಂಯೋಜಕರುಗಳಾದ ಪ್ರೊ.ಅಹ್ಮದ್ ಖಾನ್, ಪ್ರೊ.ದಿವ್ಯಾ ಶೆಟ್ಟಿ, ಪ್ರೊ.ಆಸಿಫ್, ಪ್ರೊ.ಮಹಮ್ಮದ್ ಸಿರಾಜುದ್ದೀನ್ ಮುಂತಾದವರು ಉಪಸ್ಥಿತರಿದ್ದರು.
ಪ್ರೊ.ಅಮ್ಜಾದ್ ಖಾನ್ ಕಾರ್ಯಕ್ರಮದ ವರದಿ ವಾಚಿಸಿದರು. ಪ್ರೊ.ಆಸೀಫ್ ಸ್ವಾಗತಿಸಿ, ಅಖೀಫ್ ಇಸ್ಮಾಯಿಲ್ ವಂದಿಸಿದರು. ಅಬ್ದುಲ್ ಪಥಾಹ್ ಕಾರ್ಯಕ್ರಮ ನಿರೂಪಿಸಿದರು.
ಟೆಕ್ನಿಕಲ್ ಫೆಸ್ಟ್ ಸ್ಪರ್ಧಾ ಕಾರ್ಯಕ್ರಮದಲ್ಲಿ ತಂತ್ರಜ್ಞಾನದ ಕ್ಷೇತ್ರದ ವಿವಿಧ ವಿಭಾಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು. ಸ್ಪರ್ಧೆಯಲ್ಲಿ ವಿವಿಧ ಕಾಲೇಜಿನ ಸುಮಾರು 108 ಅಭ್ಯರ್ಥಿಗಳು ಭಾಗವಹಿಸಿದ್ದರು.
ಸಮಾರೋಪ ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.







