ಸಿಎಸ್ ಸಭೆಯವರೆಗೆ ಸ್ಥಳೀಯರಿಂದ ಟೋಲ್ ಸಂಗ್ರಹ ಬೇಡ: ನವಯುಗ್ ಕಂಪೆನಿಗೆ ಸಂಸದೆ ಶೋಭಾ ಸೂಚನೆ

ಉಡುಪಿ, ಫೆ.21: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆಜಮಾಡಿಯಿಂದ ಕುಂದಾಪುರವರೆಗಿನ ಸ್ಥಳೀಯರಿಂದ ಟೋಲ್ ಸಂಗ್ರಹದ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿಗಳು ಸಭೆ ನಡೆಸುವವರೆಗೆ ಯಾವುದೇ ನಿರ್ಧಾರ ಕೈಗೊಳ್ಳದಿರಲು ಸಂಸದೆ ಶೋಭಾ ಕರೆಂದ್ಲಾಜೆ ಸೂಚಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ತಮ್ಮ ಅಧ್ಯಕ್ಷತೆಯಲ್ಲಿ ಕರೆಯಲಾದ ಸಭೆಯಲ್ಲಿ ವಿಷಯವನ್ನು ಸ್ಪಷ್ಟಪಡಿಸಿದ ಶೋಭಾ ಕರೆಂದ್ಲಾಜೆ, ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಟೋಲ್ ಜಾರಿ ಮಾಡಿರುವುದು ಸರಿಯಲ್ಲ. ಸರ್ವಿಸ್ ರಸ್ತೆ ಮುಗಿಸದೆ, ಸ್ಥಳೀಯರಿಗೆ ಉಚಿತವಾಗಿ ಚಲಿಸಲು ಅವಕಾಶ ನೀಡದಿರುವ ನವಯುಗ್ ಕಂಪೆನಿಯ ರೀತಿ ನೀತಿಗಳು ಸರಿ ಇಲ್ಲ ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಟೋಲ್ ಜಾರಿ ಒಪ್ಪಂದ ದಂತೆ ಟೋಲ್ ಸಂಗ್ರಹ ಜಾರಿಯಾಗಿದೆ ಎಂದು ಸ್ಪಷ್ಟಪಡಿಸಿದರು. ರಾಜ್ಯ ಮುಖ್ಯ ಕಾರ್ಯದರ್ಶಿಗಳು ಈ ಸಂಬಂಧ ಸಭೆ ಕರೆದು ನಿರ್ಧಾರ ತಳೆಯು ವವರೆಗೆ ಸ್ಥಳೀಯರಿಂದ ಟೋಲ್ ಪಡೆಯಬೇಡಿ ಎಂದು ಎಂಪಿ ಮತ್ತೊಮ್ಮೆ ಹೇಳಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ ಬಾಕಿ ಉಳಿದ ಕೆಲಸಗಳನ್ನು ಶೀಘ್ರವಾಗಿ ಸಂಪೂರ್ಣಗೊಳಿಸಿ ಎಂದರು. ಕಾಮಗಾರಿಗಳ ಬದಲಾವಣೆ ಪಟ್ಟಿಯ ಬಗ್ಗೆಯೂ ವಿಸ್ತೃತ ಚರ್ಚೆ ನಡೆಯಿತು.
ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಅನುರಾಧ, ಆರ್‌ಟಿಒ, ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.







