ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ಪರಿಹರಿಸಿ: ಜಿಲ್ಲಾಧಿಕಾರಿ ನಕುಲ್ ಸೂಚನೆ
ಕಾರವಾರ, ಫೆ.21: ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ನಿಯಮದಡಿಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಅಧಿನಿಯಮ ಅನ್ವಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಕುಟುಂಬಗಳಲ್ಲಿ ನಡೆಯುವ ದೌರ್ಜನ್ಯಗಳು ಹೆಚ್ಚಿನ ಸಂದರ್ಭಗಳಲ್ಲಿ ಮರ್ಯಾದೆ ಕಾರಣಕ್ಕೆ ಬೆಳಕಿಗೆ ಬರುವುದಿಲ್ಲ. ಬೆಳಕಿಗೆ ಬಂದಂತಹ ಕೌಟುಂಬಿಕ ದೌರ್ಜನ್ಯ ಪ್ರಕರಣಗಳಿಗೆ ಸೂಕ್ತ ವಕೀಲರನ್ನು ನೇಮಕ ಮಾಡಿ ಸಾಧ್ಯವಾದಷ್ಟು ಶೀಘ್ರ ಇತ್ಯರ್ಥಪಡಿಸಬೇಕೆಂದು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಸಭೆಯಲ್ಲಿ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೆ ಒಂದರಂತೆ 11 ಮಹಿಳಾ ಸಾಂತ್ವನ ಕೇಂದ್ರಗಳಿವೆ. ಸಾಂತ್ವನ ಕೇಂದ್ರಗಳಲ್ಲಿ ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗುತ್ತವೆ. ಕೇಂದ್ರಗಳಲ್ಲಿ ಆಪ್ತಸಮಾಲೋಚಕರು, ಇಬ್ಬರು ಸಮಾಜ ಸೇವಕರು, ಇಬ್ಬರು ವಕೀಲರು, ಮಹಿಳಾ ಪೊಲೀಸ್ ಪೇದೆ ಕಾರ್ಯನಿರ್ವಹಿಸುತ್ತಾರೆ ಎಂದು ಮಾಹಿತಿ ನೀಡಿದರು.
ಬಾಲ್ಯ ವಿವಾಹ ನಿಗಾವಹಿಸಬೇಕು: ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳ ಮೇಲೆ ನಿಗಾ ವಹಿಸಿ ತಡೆಯಬೇಕು. ಸಾಮೂಹಿಕ ವಿವಾಹ ಸಮಾರಂಭ ಗಳಲ್ಲಿ ಬಾಲ್ಯ ವಿವಾಹ ನಡೆಯದಂತೆ ಮುನ್ನ್ನೆಚ್ಚರಿಕೆ ವಹಿಸಬೇಕು. ಬಾಲ್ಯ ವಿವಾಹ ನಡೆದ ಬಳಿಕವೂ ಪ್ರಕರಣ ದಾಖಲಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಲ್. ಚಂದ್ರಶೇಖರ ನಾಯಕ ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ದೇವೇಂದ್ರ ಪಂಡಿತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯ 11 ಮಹಿಳಾ ಸಾಂತ್ವನ ಕೇಂದ್ರಗಳಲ್ಲಿ ಜನವರಿ 2016 ರಿಂದ ಜನವರಿ 2017ರ ವರೆಗೆ ಕೌಟುಂಬಿಕ ಹಿಂಸೆಗೆ ಸಂಬಂಧಪಟ್ಟಂತೆ ಒಟ್ಟು 228 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 159 ಪ್ರಕರಣಗಳು ಇತ್ಯರ್ಥಗೊಂಡಿರುತ್ತವೆ. 58 ಪ್ರಕರಣಗಳು ಸಂರಕ್ಷಣಾಧಿಕಾರಿಗಳಲ್ಲಿ ಮತ್ತು 11 ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿಯಿವೆ.







