ಉಡುಪಿ: ಫೆ.26ಕ್ಕೆ ಪ್ರೊ.ರಾಮದಾಸ್ ಅಭಿನಂದನೆ
ಉಡುಪಿ, ಫೆ.21: ಬಹುಮುಖ ಪ್ರತಿಭೆಯ ರಂಗಕರ್ಮಿ, ಸಾಹಿತಿ, ಲೇಖಕ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಮದಾಸ್ ಅವರ ಅಭಿನಂದನೆ, ಅವರ ಬದುಕು-ಬರಹಗಳ ಅವಲೋಕನ ಹಾಗೂ ಅವರ 'ದಾಸ ಭಾರತ' ಕೃತಿ ಬಿಡುಗಡೆ ಸಮಾರಂಭ ಫೆ.26ರ ರವಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಪ್ರೊ.ರಾಮದಾಸ್ ಅಭಿನಂದ ಸಮಿತಿಯ ಅಧ್ಯಕ್ಷ ಡಾ.ಎಚ್.ಶಾಂತಾರಾಮ ಅವರು ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕಾರ್ಯಕ್ರಮವನ್ನು ಪ್ರೊ.ಉದ್ಯಾವರ ಮಾಧವ ಆಚಾರ್ಯ ಅಧ್ಯಕ್ಷತೆಯಲ್ಲಿ ಕನ್ನಡ ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮುಖ್ಯ ಅತಿಥಿಯಾಗಿರುವರು ಎಂದರು.
ಪ್ರೊ.ರಾಮದಾಸರ ಅಭಿನಂದನಾ ಸಮಾರಂಭ ಡಾ.ಎಚ್. ಶಾಂತಾರಾಮ್ ಅಧ್ಯಕ್ಷತೆಯಲ್ಲಿ ಸಂಜೆ 4:30ಕ್ಕೆ ನಡೆಯಲಿದೆ. ಮೂಡಬಿದರೆಯ ಡಾ.ಎಂ. ಮೋಹನ ಆಳ್ವ ಅವರು 'ದಾಸ ಭಾರತ' ಬಿಡುಗಡೆಗೊಳಿಸುವರು.
ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಪುಸ್ತಕ ಅವಲೋಕನ ಮಾಡುವರು. ನ.ರವಿಕುಮಾರ್ ಹಾಗೂ ಶ್ರೀನಿವಾಸ ಕುಡಂತಾಯ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಡಾ.ನಿ.ಬೀ.ವಿಜಯ ಬಲ್ಲಾಳ್ ಹಾಗೂ ಡಾ.ಮಹಾಬಲೇಶ್ವರ ರಾವ್ ಅಭಿನಂದನ ಭಾಷಣ ಮಾಡಲಿದ್ದಾರೆ.
ಈ ನಡುವೆ ಪ್ರೊ.ರಾಮದಾಸರ ಬದುಕು-ಬರಹಗಳ ಅವಲೋಕನ ನಡೆಯಲಿದೆ. ಇದರಲ್ಲಿ ಡಾ.ನಾ.ಮೊಗಸಾಲೆ, ಡಾ.ಜಿ.ಪಿ.ಬೃಜಮೋಹನ್ ಕುಮಾರ್, ಪ್ರೊ.ನಟರಾಜ ದೀಕ್ಷಿತ್, ಪ್ರೊ.ಸಿ.ಎಸ್.ಯಾದವಾಡ, ರಾಜಾ ಶೈಲೇಶ್‌ಚಂದ್ರ ಗುಪ್ತ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಪ್ರೊ.ಸದಾಶಿವ ರಾವ್, ಕೋಶಾಧಿಕಾರಿ ಮುರಲಿ ಕಡೆಕಾರ್, ಪ್ರೊ.ರಾಧಾಕೃಷ್ಣ ಆಚಾರ್ಯ, ಎಸ್.ವಿ.ಭಟ್ ಮುಂತಾದವರು ಉಪಸ್ಥಿತರಿದ್ದರು.







