ಆತ್ಮಹತ್ಯೆಗೆ ಮುನ್ನ ವೇಮುಲಾ ಬರೆದ ಪತ್ರ ಓದಿ ಅತ್ತು ಬಿಟ್ಟೆ : ಬಿಜೆಪಿ ಸಂಸದ ವರುಣ್ ಗಾಂಧಿ

ಹೊಸದಿಲ್ಲಿ,ಫೆ.21: ಹೈದರಾಬಾದ್ ವಿವಿಯಲ್ಲಿ ಕಳೆದ ವರ್ಷ ಸಾವಿಗೆ ಶರಣಾದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಬರೆದಿಟ್ಟಿದ್ದ ಆತ್ಮಹತ್ಯಾ ಪತ್ರವನ್ನು ಓದಿದ ಬಳಿಕ ತಾನು ದುಃಖ ತಡೆಯಲಾರದೆ ಅತ್ತಿದ್ದೆನೆಂಬದನ್ನು ಬಿಜೆಪಿ ಸಂಸದ ವರುಣ್‌ಗಾಂಧಿ ಮಂಗಳವಾರ ನೆನಪಿಸಿಕೊಂಡಿದ್ದಾರೆ.
‘‘ಹೈದರಾಬಾದ್‌ನ ದಲಿತ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ ಬರೆದ ಪತ್ರವನ್ನು ಓದಿದಾಗ,ನಾನು ಕಣ್ಣೀರಿಟ್ಟಿದ್ದೆ. ತಾನು ಈ ರೀತಿಯಾಗಿ ಹುಟ್ಟಿದ್ದೇ ತಪ್ಪಾಗಿದ್ದರಿಂದ,ಇಂತಹ ಘೋರ ಹೆಜ್ಜೆಯನ್ನಿಡಬೇಕಾಯಿತೆಂದು ರೋಹಿತ್ ಬರೆದಿದ್ದರು. ಈ ಸಾಲು ನನ್ನ ಹೃದಯಕ್ಕೆ ತೀವ್ರವಾದ ಘಾಸಿಯನ್ನುಂಟುಮಾಡಿತು’’ ಎಂದು ವರುಣ್ ತಿಳಿಸಿದರು.
ಕಳೆದ ವರ್ಷದ ಜನವರಿ 16ರಂದು ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡ ಘಟನೆಯು ದೇಶಾದ್ಯಂತ ಭಾರೀ ಕೋಲಾಹಲವನ್ನು ಸೃಷ್ಟಿಸಿತ್ತು. ಮೃತ ರೋಹಿತ್‌ಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಹಾಗೂ ಪ್ರತಿಪಕ್ಷಗಳು ರಾಷ್ಟ್ರವ್ಯಾಪಿ ಚಳವಳಿ ನಡೆಸಿದ್ದವು. ರೋಹಿತ್‌ನ ಸಾವಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಿಜೆಪಿ ನಾಯಕ ಬಂಡಾರು ದತ್ತಾತ್ರೇಯ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಹೊಸದಿಲ್ಲಿಯ ಖಾಸಗಿ ಶಾಲೆಯೊಂದು ಆಯೋಜಿಸಿದ್ದ ‘ನವ ಭಾರತದ ಚಿಂತನೆಗಳು’’ ಕುರಿತ ವಿಷಯವಾಗಿ ಉಪನ್ಯಾಸ ನೀಡುತ್ತಿದ್ದರು.
ಕಳೆದ ತಿಂಗಳು ಮಧ್ಯಪ್ರದೇಶದ ತಿಕಂಘರ್‌ನಲ್ಲಿ ನಡೆದ ದಲಿತ ತಾರತಮ್ಯದ ಘಟನೆಯನ್ನು ಕೂಡಾ ವರುಣ್ ತನ್ನ ಭಾಷಣದಲ್ಲಿ ಪ್ರಸ್ತಾಪಿಸಿದರು.
‘‘ ದಲಿತ ವರ್ಗಕ್ಕೆ ಸೇರಿದ ಮಹಿಳೆಯೊಬ್ಬಳು ಅಡಿಗೆ ಮಾಡಿದ್ದಳೆಂಬ ಕಾರಣಕ್ಕಾಗಿ ಶಾಲೆಯ ಶೇ.70ರಷ್ಟು ಮಕ್ಕಳು ಮಧ್ಯಾಹ್ನದೂಟ ಯೋಜನೆಯಡಿ ನೀಡಲಾಗುತ್ತಿದ್ದ ಭೋಜನವನ್ನು ಸೇವಿಸುತ್ತಿರಲಿಲ್ಲ ಎಂದವರು ಆಘಾತ ವ್ಯಕ್ತಪಡಿಸಿದರು. ನಾವು ನಮ್ಮ ಮಕ್ಕಳಿಗೆ ಎಂತಹ ಶಿಕ್ಷಣವನ್ನು ನೀಡುತ್ತಿದ್ದೇವೆ?. ಒಟ್ಟಾರೆಯಾಗಿ ಈ ದೇಶ ಹಾಗೂ ಜಗತ್ತು ಎತ್ತ ಸಾಗುತ್ತಿದೆ ಎಂದು ವರುಣ್ ಪ್ರಶ್ನಿಸಿದರು.
ಸಂವಿಧಾನವು ಜಾತಿ ಹಾಗೂ ಧರ್ಮದ ಆಧಾರದಲ್ಲಿ ಯಾವುದೇ ತಾರತಮ್ಯ ಮಾಡದಿದ್ದರೂ, ದೇಶದ ಶೇ.37ರಷ್ಟು ದಲಿತರು ಬಡತನ ರೇಖೆಯಡಿ ಬದುಕುತ್ತಿದ್ದಾರೆ. ಶೇ.8ರಷ್ಟು ದಲಿತ ಮಕ್ಕಳು ತಮ್ಮ ಮೊದಲ ಹುಟ್ಟುಹಬ್ಬದ ಆಚರಣೆಗೆ ಮುನ್ನವೇ ಸಾವನ್ನಪ್ಪುತ್ತಿದ್ದಾರೆಂದು ವರುಣ್ ವಿಷಾದಿಸಿದರು.