ಉಡುಪಿ: ವಿಶು ಶೆಟ್ಟಿಯಿಂದ ವಾರಸುದಾರರಿಲ್ಲದ 49ನೆ ಶವಸಂಸ್ಕಾರ
ಉಡುಪಿ, ಫೆ.21: ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಸಾಮಾಜಿಕ ಕಾರ್ಯಕರ್ತರ ಶ್ರಮದಾನದ ಸಹಕಾರದೊಂದಿಗೆ ಸುಮಾರು 32 ವರ್ಷದ ಅಪರಿಚಿತ ಯುವಕನ ಶವಸಂಸ್ಕಾರವನ್ನು ಉಡುಪಿ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಿದರು. ಇದರೊಂದಿಗೆ ವಿಶು ಶೆಟ್ಟಿ ವಾರಸುದಾರರಿಲ್ಲದ 49 ಶವಸಂಸ್ಕಾರ ನಡೆಸಿದಂತಾಗಿದೆ.
ಜ.19ರಂದು ಅಪರಿಚಿತ ವ್ಯಕ್ತಿಯೊರ್ವ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ ನಿಲ್ದಾಣದಲ್ಲಿ ಗಂಭೀರ ಅನಾರೋಗ್ಯ ಸ್ಥಿತಿಯಲ್ಲಿ ಪತ್ತೆ ಯಾಗಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜ.20ರಂದು ಅವರು ಮೃತಪಟ್ಟರು.
ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ವಾರಸುದಾರರ ಬರುವಿಕೆಗಾಗಿ ಇಡಲಾಗಿತ್ತು. ಆತನ ಶರ್ಟ್ ಜೇಬಿನಲ್ಲಿ ಪತ್ತೆಯಾದ ಆಧಾರ್ ಕಾರ್ಡ್ ನಿಂದ ಆತ ಹೆಸರು ಪಿಲಿಫ್ಸ್ ಗ್ರೇಬಿಯಲ್, ತಂದೆ ಡೇವಿಡ್, ಗುಜರಾತ್ ರಾಜ್ಯದ ಸೂರತ್ ಎಂಬುದು ತಿಳಿಯಿತು. ವಿಳಾಸದ ಆಧಾರದ ಮೇಲೆ ಮಲ್ಪೆ ಪೊಲೀಸರು ವಾರಸುದಾರರ ಹುಡುಕಾಟಕ್ಕಾಗಿ ಗುಜರಾತಿಗೆ ಹೋದಾಗ ಆ ವಿಳಾಸದಲ್ಲಿ ಯಾರು ವಾಸ್ತವ್ಯ ಇಲ್ಲವಾಗಿದ್ದರು.
ವಿಶು ಶೆಟ್ಟಿ ಉಡುಪಿಯಲ್ಲಿರುವ ಉತ್ತರ ಭಾರತದ ಬಹಳಷ್ಟು ವಲಸೆ ಕಾರ್ಮಿಕರಲ್ಲಿ ಮೃತ ವ್ಯಕ್ತಿಯ ಬಗ್ಗೆ ವಿಚಾರಿಸಿದ್ದರೂ ಯಾವೊಂದು ಮಾಹಿತಿ ದೊರೆಯಲಿಲ್ಲ. ಪೊಲೀಸರು ಮೃತವ್ಯಕ್ತಿಯ ವಾರಸುದಾರರ ಬರುವಿಕೆಗಾಗಿ ಮಾಧ್ಯಮ ಪ್ರಕಟಣೆ ನೀಡಿಯೂ ಯಾರು ಬಾರದ ಕಾರಣ, ವ್ಯಕ್ತಿ ಮೃತ ಪಟ್ಟು 31 ದಿನಗಳ ನಂತರ ಫೆ.21ರಂದು ಶವಮಹಜರು- ಕಾನೂನು ಪ್ರಕ್ರಿಯೆ ನಡೆಸಿ, ವಿಶು ಶೆಟ್ಟಿ ಮುಂದಾಳತ್ವದಲ್ಲಿ ಮಲ್ಪೆ ಪೊಲೀಸರ ಸಮಕ್ಷಮ ಶವಕ್ಕೆ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳ ಗೌರವ ಸಲ್ಲಿಸಿ, ಕಾನೂನು ಪ್ರಕಾರ ದಫನ ಮಾಡಲಾಯಿತು.
ಶವಸಂಸ್ಕಾರದ ಕಾರ್ಯಕ್ಕೆ ಸಾಮಾಜಿಕ ಕಾರ್ಯಕರ್ತರಾದ ತಾರಾನಾಥ್ ಮೇಸ್ತ ಶಿರೂರು, ರಾಮದಾಸ್ ಪಾಲನ್ ಉದ್ಯಾವರ ಶ್ರಮದಾನದ ಮುಖಾಂತರ ಸಹಕರಿಸಿದರು.







