ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯತ್‌ನಲ್ಲಿ 63 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ

ಮೂಡುಬಿದಿರೆ, ಫೆ.21: ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಕುಮೇರ್‌ನಲ್ಲಿ ಮೀಸಲಿರಿಸಿರುವ ಸುಮಾರು 4 ಎಕ್ರೆ ಪ್ರದೇಶವನ್ನು ನಿವೇಶನಗಳಾಗಿ ರೂಪಿಸಿದ್ದು 63 ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಹಾಗೂ ಮನೆ ನಿರ್ಮಾಣಗಳಿಗಾಗಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನೀಡುವ 1.20ಲಕ್ಷ ಹಾಗೂ ಉದ್ಯೋಗ ಖಾತರಿ ಯೋಜನೆಯಡಿ 20 ಸಾವಿರ ರೂಗಳ ಕಾಮಗಾರಿಯ ಕಾರ್ಯಾದೇಶ ಪತ್ರವನ್ನು ಮಂಗಳವಾರ ಅಶ್ವತ್ಥಪುರ ವಿವಿದೊದ್ದೇಶ ಸಭಾಂಗಣದಲ್ಲಿ ಶಾಸಕ ಕೆ. ಅಭಯಚಂದ್ರ ಜೈನ್ ವಿತರಿಸಿದರು.
ನಂತರ ನಡೆದ ಸಮಾರಂಭದಲ್ಲಿ ಶಾಸಕ ಕೆ. ಅಭಯಚಂದ್ರ ಜೈನ್ ಮಾತನಾಡಿ, ಕೃಷಿ ಆಧಾರಿತ ಜನರು ಸೇರಿದಂತೆ ಪ್ರತಿಯೊಬ್ಬರು ಸ್ವಂತ ಸೂರು ಹೊಂದಬೇಕು ಎನ್ನುವುದು ಸರ್ಕಾರದ ಇಚ್ಛೆಯಾಗಿದೆ. ಈ ನಿಟ್ಟಿನಲ್ಲಿ ಅತ್ಯಂತ ಕನಿಷ್ಠ ದರದಲ್ಲಿ ನಿವೇಶನವನ್ನು ನೀಡುವುದಲ್ಲದೆ ಮನೆ ನಿರ್ಮಿಸಲು ಆರ್ಥಿಕ ನೆರವನ್ನು ಪಡೆದುಕೊಳ್ಳಬೇಕು. ಜನರು ತಮ್ಮ ಬೇಡಿಕೆಗಳಿಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸೌಹಾರ್ದದಿಂದ ವ್ಯವಹರಿಸಬೇಕು. ಗ್ರಾಮದಲ್ಲಿ ನಿವೇಶನ ರಹಿತ ಅರ್ಹ ಫಲಾನುಭವಿಗಳಿದ್ದರೆ ಪಂಚಾಯತ್ ಗಮನಕ್ಕೆ ತರುವ ಮೂಲಕ ನಿವೇಶನ ರಹಿತರಿಗೆ ನಿವೇಶನವನ್ನು ಮತ್ತು ಆಶ್ರಯ ಮನೆಗಳನ್ನು ಕೊಡಿಸುವಂತಹ ಕೆಲಸವನ್ನು ಮಾಡಬೇಕು ಎಂದ ಅವರು ಗ್ರಾಮದ ಜನರ ಬೇಡಿಕೆಯಾದ ಅಶ್ವತ್ಥಪುರ - ಪಿದಮಲೆ ರಸ್ತೆಗೆ ಡಾಮರೀಕರಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದದ್ದು ಸದ್ಯದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಸರ್ಕಾರದ ಬೇರೆ ಬೇರೆ ಯೋಜನೆಗಳ ಮೂಲಕ ಗ್ರಾಮೀಣ ರಸ್ತೆಗಳ ಅಭಿವೃದ್ಧಿಪಡಿಸಲಾಗುವುದುಎಂದರು.
ಈ ಹಿಂದೆ ಎಪಿಎಂಸಿ ಮಾರುಕಟ್ಟೆಯಾಗಿದ್ದು ನಂತರದ ದಿನಗಳಲ್ಲಿ ಪಾಳುಬಿದ್ದಿದ್ದ ಕಟ್ಟಡವನ್ನು ಈಗ ಪಂಚಾಯತ್ ವತಿಯಿಂದ ನವೀಕೃತಗೊಳಿಸಿ ವಿವಿದೊದ್ದೇಶ ಸಭಾಂಗಣವಾಗಿ ರೂಪಿಸಿದ್ದು ಇದನ್ನು ಅಭಯಚಂದ್ರ ಜೈನ್ ಲೋಕಾರ್ಪಣೆಗೊಳಿಸಿದರು.
ಫಲಾನುಭವಿಗಳಿಗೆ ನೀಡಿದ ಬಡಾವಣೆಗೆ ಯಕ್ಷಗಾನ ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪ ನಗರಎಂದು ಮರುನಾಮಕರಣ ಮಾಡಲಾಯಿತು. ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ 2 ಜನರಿಗೆ ಸಂಧ್ಯಾ ಸುರಕ್ಷಾ ಯೋಜನೆಯ ಆದೇಶಪತ್ರವನ್ನು ವಿತರಿಸಿ ಮಾತನಾಡಿ, ದೇಶ ಅಭಿವೃದ್ಧಿಯಾಗಲು ಗ್ರಾಮೀಣ ಪ್ರದೇಶ ಮತ್ತು ಅಲ್ಲಿನ ಜನರು ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶ ಮತ್ತು ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ತೆಂಕಮಿಜಾರು ಗ್ರಾ.ಪಂಚಾಯತ್ ಗ್ರಾಮದ ಜನರ ಅಭಿವೃದ್ಧಿಗಾಗಿ ಸದಾ ಶ್ರಮಿಸುವ ಮೂಲಕ ಮಾದರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ 7 ಜನ ವಿಕಲಚೇತನರಿಗೆ, 8 ಜನರಿಗೆ ಎಸ್‌ಸಿ-ಎಸ್‌ಟಿ ಸಹಾಯಧನದ ಚೆಕ್‌ನ್ನು ವಿತರಿಸಲಾಯಿತು. ತಹಶೀಲ್ದಾರ್ ಮಹಮ್ಮದ್ ಇಸಾಕ್, ಜಿ.ಪಂ ಇಂಜಿನಿಯರ್ ಸುಜನ್‌ರಾವ್, ತಾ.ಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸದಾನಂದ, ತಾ.ಪಂ ಸದಸ್ಯ ಪ್ರಕಾಶ್ ಗೌಡ, ಆಳ್ವಾಸ್ ಪ್ರಕೃತಿ ಮತ್ತು ನ್ಯಾಚುರೋಪತಿ ಕಾಲೇಜಿನ ಉಪನ್ಯಾಸಕಿ ಡಾ. ಅರ್ಚನಾ ಪದ್ಮನಾಭ ಶೆಣೈ ಭಾಗವಹಿಸಿದರು. ಉಪಾಧ್ಯಕ್ಷೆ ಹೇಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ :
ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಪ್ರಶಸ್ತಿ ಪಡೆದಿರುವ ನೀರ್ಕೆರೆ ಶಾಲೆಯ ಶಿಕ್ಷಕಿ ವಿಜಯಶ್ರೀ ಹಾಲಾಡಿ ಅವರನ್ನು ಸನ್ಮಾನಿಸಲಾಯಿತು ಮತ್ತು ಎಪಿಎಂಸಿ ಸದಸ್ಯರಾಗಿ ಆಯ್ಕೆಯಾಗಿರುವ ಚಂದ್ರಹಾಸ ಸನಿಲ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಕೇಶ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.







