3 ಕೋಟಿಗೆ ಎಷ್ಟು ಸೊನ್ನೆಗಳಿವೆ ಎಂದೇ ಗೊತ್ತಿಲ್ಲ: ನಟರಾಜನ್

ಚೆನ್ನೈ,ಫೆ.21: ಬೆಂಗಳೂರಿನಲ್ಲಿ ಸೋಮವಾರ 10ನೆ ಆವೃತ್ತಿಯ ಐಪಿಎಲ್ ಟೂರ್ನಿಗೆ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 3 ಕೋಟಿ. ರೂ.ಗೆ ಹರಾಜಾಗಿರುವ ತಮಿಳುನಾಡಿನ ಎಡಗೈ ವೇಗದ ಬೌಲರ್ ನಟರಾಜನ್ ಸಂತೋಷಕ್ಕೆ ಪಾರವೇ ಇಲ್ಲವಾಗಿದೆ.
‘‘ನಾನೀಗ ಹಣದ ಬಗ್ಗೆ ಯೋಚಿಸುತ್ತಿಲ್ಲ. ಇಷ್ಟೊಂದು ಹಣ ಸಿಗಬಹುದೆಂದು ಊಹಿಸಿರಲಿಲ್ಲ. ನಿಜ ಹೇಳಬೇಕೆಂದರೆ ನನಗೆ ಮೂರು ಕೋಟಿ ರೂ.ಗಳಲ್ಲಿ ಎಷ್ಟು ಸೊನ್ನೆಗಳಿವೆಯೆಂದು ಗೊತ್ತಿಲ್ಲ’’ ಎಂದು ಹಿಂದೂಸ್ತಾನ್ ಟೈಮ್ಸ್’ ನೀಡಿರುವ ಸಂದರ್ಶನವೊಂದರಲ್ಲಿ ನಟರಾಜನ್ ತನ್ನ ಮುಗ್ಧತೆ ಪ್ರದರ್ಶಿಸಿದರು.
25ರ ಹರೆಯದ ನಟರಾಜನ್ 10 ಲಕ್ಷ ರೂ. ಮೂಲಬೆಲೆ ಹೊಂದಿದ್ದರು. ಹೊಸ ಆಟಗಾರರ ಪೈಕಿ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇವಲ 5 ಪ್ರಥಮ ದರ್ಜೆ ಪಂದ್ಯಗಳು, ಐದು ಟ್ವೆಂಟಿ-20 ಪಂದ್ಯಗಳನ್ನು ಆಡಿರುವ ನಟರಾಜನ್ ಐಪಿಎಲ್‌ಗೆ ಆಯ್ಕೆಯಾಗಿರುವುದಕ್ಕೆ ರೋಮಾಂಚನಗೊಂಡಿದ್ದು, ತನ್ನ ಬೌಲಿಂಗ್‌ನ್ನು ಉತ್ತಮಪಡಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಟರಾಜನ್ ಅವರ ತಂದೆ ಕೂಲಿ ಕಾರ್ಮಿಕನಾಗಿದ್ದರೆ, ತಾಯಿ ತವರುಪಟ್ಟಣ ಸೇಲಂನಲ್ಲಿ ರಸ್ತೆ ಬದಿಯಲ್ಲಿ ಚಿಕನ್ ಹಾಗೂ ಸ್ನಾಕ್ಸ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಐವರು ಮಕ್ಕಳ ಪೈಕಿ ಹಿರಿಯನಾಗಿರುವ ನಟರಾಜನ್ ಕ್ರಿಕೆಟ್ ಪಂದ್ಯದ ಶುಲ್ಕದಿಂದ ಕುಟುಂಬದ ಖರ್ಚುವೆಚ್ಚ ಭರಿಸುತ್ತಿದ್ದಾರೆ. ನಟರಾಜನ್ ಓರ್ವ ಸಹೋದರಿಗೆ ವಿವಾಹವಾಗಿದ್ದು, ಇತರ ಇಬ್ಬರು ಸಹೋದರಿಯರು ಹಾಗೂ ಓರ್ವ ಸಹೋದರ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.







