ಐಪಿಎಲ್ ಹಗರಣ: ಇಡಿ ಮಾಜಿ ಜಂಟಿ ನಿರ್ದೇಶಕ ಬಂಧನ

ಹೊಸದಿಲ್ಲಿ, ಫೆ.22: ಇಂಡಿಯನ್ ಪ್ರಿಮಿಯರ್ ಲೀಗ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು, ಕಾನೂನು ಜಾರಿ ನಿರ್ದೇಶನಾಲಯದ ಮಾಜಿ ಜಂಟಿ ನಿರ್ದೇಶಕ ಜೆ.ಪಿ.ಸಿಂಗ್ ಹಾಗೂ ಇತರ ಮೂವರನ್ನು ಬಂಧಿಸಿದ್ದಾರೆ. ಮೋಸದಾಟ ಪ್ರಕರಣದ ತನಿಖೆ ದುರ್ಬಲಗೊಳಿಸುವ ಸಲುವಾಗಿ ಲಂಚ ಪಡೆದ ಆರೋಪದಲ್ಲಿ ಅವರನ್ನು ಅಧಿಕಾರಿಗಳನ್ನು ಬಂಧಿಸಲಾಗಿದೆ.
2000ನೇ ಇಸವಿಯ ಐಆರ್‌ಎಸ್ ಅಧಿಕಾರಿಯಾಗಿರುವ ಸಿಂಗ್, ಕಸ್ಟಮ್ಸ್ ಹಾಗೂ ಎಕ್ಸೈಸ್ ಕೇಡರ್ ಅಧಿಕಾರಿ. 2015ರ ಸೆಪ್ಟೆಂಬರ್‌ನಲ್ಲಿ ಸಿಬಿಐ ಇವರ ವಿರುದ್ಧ ಪ್ರಕರಣ ದಾಖಲಿಸಿದ ಬಳಿಕ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಅಂದು ಕಾನೂನು ಜಾರಿ ನಿರ್ದೇಶನಾಲಯದಲ್ಲಿ ಉಪ ನಿರ್ದೇಶಕರಾಗಿದ್ದ ಸಂಜಯ್ ಕುಮಾರ್, ಮುಂಬೈ ಮೂಲದ ಮಧ್ಯವರ್ತಿ ಬಿಮಲ್ ಅಗರ್‌ವಾಲ್ ಹಾಗೂ ಗುಜರಾತ್‌ನ ಬುಕ್ಕಿ ಚಂದ್ರೇಶ್ ಪಟೇಲ್ ಅವರನ್ನೂ ಬಂಧಿಸಲಾಗಿದೆ.
ಸಿಂಗ್ ಅವರು ಹಲವು ಕೋಟಿ ರೂಪಾಯಿಗಳನ್ನು ಲಂಚದ ರೂಪದಲ್ಲಿ ಬುಕ್ಕಿಗಳಿಂದ ಪಡೆದಿರುವ ಆರೋಪ ಎದುರಿಸುತ್ತಿದ್ದಾರೆ. ಹಣಕಾಸು ಅವ್ಯವಹಾರ ತಡೆ ಕಾಯ್ದೆಯಡಿ ಐಪಿಎಲ್ ಮೋಸದಾಟ ಪ್ರಕರಣದ ಬಗ್ಗೆ ವಿಚಾರಣೆ ನಡೆಸುವ ತಂಡದ ಮುಖ್ಯಸ್ಥರಾಗಿ ಇವರು ಕಾರ್ಯ ನಿರ್ವಹಿಸುತ್ತಿದ್ದರು.