ಜಿನ್ನ್ ಚಿಕಿತ್ಸೆಯ ಹೆಸರಲ್ಲಿ ಸುಟ್ಟ ಗಾಯಗಳಾಗಿದ್ದ ಯುವತಿ ಮೃತ್ಯು

ನಾದಾಪುರಂ(ಕಲ್ಲಿಕೋಟೆ), ಫೆ.22: ಮದುವೆ ಆಗದಿದ್ದಕ್ಕಾಗಿ ಪರಿಹಾರಾರ್ಥ "ಜಿನ್ನ್ ಚಿಕಿತ್ಸೆ" ನಡೆದು ಗಂಭೀರ ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆದಾಖಲಾಗಿದ್ದ ಯುವತಿ ಮೃತಪಟ್ಟಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಅವರು ಮೃತರಾದರು. ಪುರಮೇರಿ ಎಂಬಲ್ಲಿ "ಜಿನ್ನ್ ಚಿಕಿತ್ಸೆ" ನಡೆಯುತ್ತಿದ್ದಾಗ ಯುವತಿಯ ದೇಹಕ್ಕೆ ಬೆಂಕಿ ಹಿಡಿದಿತ್ತು. ಮೃತ ಪಟ್ಟ ಯುವತಿ ಕಲ್ಲಿಕೋಟೆ ಹೊಸ ಕಡವ್ ಲೈಲಾ ಮಂಝಿಲ್‌ನ ಶಮೀನಾ(27) ಆಗಿದ್ದಾರೆ. "ಜಿನ್ನ್ ಚಿಕಿತ್ಸೆ" ನೀಡಿದ ತುವೋಟ್ಟ್ ಪೊಯಿಲ್ ನಜ್ಮಾ(34)ಳಿಗೆ ನಾದಾಪುರಂ ಕೋರ್ಟು ರಿಮಾಂಡ್ ವಿಧಿಸಿದೆ.
ಶನಿವಾರ ಶಮೀನಾರಿಗೆ ಸುಟ್ಟಗಾಯಗಳಾಗಿದ್ದವು. ಪೊಲೀಸರಿಗೆ ದೂರು ನೀಡಿದ್ದರಿಂದ ಘಟನೆ ಬಹಿರಂಗವಾಗಿತ್ತು. ಪೊಲೀಸರು ಸ್ಥಳದಲ್ಲಿ ತನಿಖೆ ನಡೆಸಿದಾಗ ಬೆಂಕಿಯಿಂದ ಸುಟ್ಟ ವಸ್ತ್ರಗಳು ಪತ್ತೆಯಾಗಿದ್ದವು. ಬೆಂಕಿಹಿಡಿದಿದ್ದ ಬಟ್ಟೆಗಳನ್ನು ನಜ್ಮಾ ಮನೆಯ ಬಳಿ ಸುಟ್ಟು ಹಾಕಿದ್ದರು. "ಜಿನ್ನ್ ಚಿಕಿತ್ಸೆ"ಯನ್ನು ಶಮೀನಾರ ಸಂಬಂಧಿಕರು ಮೊದಲು ತಿಳಿಸಿರಲಿಲ್ಲ. ಗ್ಯಾಸ್‌ಸ್ಟೌವ್ ಸ್ಫೋಟದಿಂದ ಬೆಂಕಿ ಹಿಡಿದಿದೆ ಎಂದು ಆಸ್ಪತ್ರೆಯಲ್ಲಿ ಹೇಳಿದ್ದರೆಂದು ವರದಿ ತಿಳಿಸಿದೆ.





