ದಾಳಿಗೊಳಗಾದ ಯಹೂದಿ ಸ್ಮಶಾನ ದುರಸ್ತಿಗೆ 20,000 ಡಾ. ನಿಧಿ ಸಂಗ್ರಹಿಸಿದ ಮುಸ್ಲಿಮರು

ನ್ಯೂಯಾರ್ಕ್, ಫೆ.22 : ಇಬ್ಬರು ಅಮೆರಿಕನ್ ಮುಸ್ಲಿಮರು ಮಂಗಳವಾರದಂದು ಕೇವಲ ಎರಡೇ ಗಂಟೆಗಳಲ್ಲಿ ಕ್ರೌಡ್‌ಫಂಡಿಂಗ್ ಅಭಿಯಾನದ ಮೂಲಕಸೈಂಟ್ ಲೂಯಿಸ್ ನಲ್ಲಿರುವ ಐತಿಹಾಸಿಕ ಯಹೂದಿ ಸ್ಮಶಾನ ದುರಸ್ತಿಗೆ 20,000 ಡಾಲರ್ ಹಣ ಸಂಗ್ರಹಿಸಿದ್ದಾರೆ. ಈ ಸ್ಮಶಾನವು ರವಿವಾರ ರಾತ್ರಿ ಅಥವಾ ಸೋಮವಾರ ಮುಂಜಾವಿನ ವೇಳೆ ದುಷ್ಕರ್ಮಿಗಳ ದಾಳಿಯಿಂದ ಹಾನಿಗೊಂಡಿತ್ತು.
ಲಿಂಡಾ ಸರ್ಸೌರ್ ಮತ್ತು ತಾರೆಕ್-ಎಲ್-ಮೆಸ್ಸಿದಿ ಎಂಬಿಬ್ಬರು ಅಮೆರಿಕನ್ ಮುಸ್ಲಿಮರು ಹಣ ಸಂಗ್ರಹ ಅಭಿಯಾನ ಕೈಗೊಂಡು ಅಮೆರಿಕದಲ್ಲಿ ದ್ವೇಷ, ವೈರತ್ವ ಹಾಗೂ ಹಿಂಸೆ ಹಾಗೂ ಹಾನಿಗೆ ಆಸ್ಪದವಿಲ್ಲವೆಂಬ ಸಂದೇಶವನ್ನು ಯಹೂದಿ ಮತ್ತು ಮುಸ್ಲಿಂ ಸಮುದಾಯಕ್ಕೆ ತಾವು ನೀಡಬಯಸುವುದಾಗಿ ಹೇಳಿದ್ದಾರೆ.
ದಾಳಿಗೆ ಕಾರಣಕರ್ತರು ಯಾರೆಂದು ತಿಳಿಯಲು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ತಿಳಿದುಕೊಳ್ಳಲು ತನಿಖಾಕಾರರು ಯತ್ನಿಸುತ್ತಿದ್ದಾರೆ. ಯಹೂದಿಯಾಗಿರುವ ಮಿಸ್ಸೋರಿಯ ಗವರ್ನರ್ ಎರಿಕ್ ಗ್ರೀಟೆನ್ಸ್‌ಈ ದಾಳಿಯನ್ನುಒಂದುಹೇಡಿಗಳ ಕೃತ್ಯವೆಂದು ಬಣ್ಣಿಸಿ ಖಂಡಿಸಿದ್ದಾರಲ್ಲದೆ ಸ್ಮಶಾನವನ್ನು ಸ್ವಚ್ಛಗೊಳಿಸಲು ಸ್ವಯಂಸೇವಕರ ಸಹಕಾರ ಕೋರಿದ್ದಾರೆ.
ಮಂಗಳವಾರದಂದು ಜೆಫರ್ಸನ್ ಸಿಟಿಯಲ್ಲಿನ ಮಿಸ್ಸೋರಿ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಈದಾಳಿಗೆ ಶೋಕ ವ್ಯಕ್ತಪಡಿಸಿ ಒಂದು ನಿಮಿಷ ಮೌನ ಆಚರಿಸಿದೆ.
ಈ ಸ್ಮಶಾನವನ್ನು 1893ರಲ್ಲಿ ಸ್ಥಾಪಿಸಲಾಗಿದ್ದು ಇದರ ಮೇಲೆ ದಾಳಿ ನಡೆಯುವುದಕ್ಕಿಂತ ಮುಂಚೆ ದೇಶದಾದ್ಯಂತವಿರುವ 11 ಯಹೂದಿ ಸಮುದಾಯ ಕೇಂದ್ರಗಳು ಬೆದರಿಕೆಗೊಳಗಾಗಿದ್ದವು.
ಈ ವರ್ಷದ ಜನವರಿಯಿಂದ ಇಲ್ಲಿಯ ತನಕ 27 ರಾಜ್ಯಗಳಲ್ಲಿರುವ 54 ಯಹೂದಿ ಸಮುದಾಯ ಕೇಂದ್ರಗಳಿಗೆ ಬೆದರಿಕೆಗಳು ಬಂದಿವೆ ಎಂದು ವರದಿಯಾಗಿದೆ.







