ವೀಡಿಯೊ ಚಿತ್ರೀಕರಿಸಿ ಈಚಲು ಹಣ್ಣು ವ್ಯಾಪಾರಿಯ ಅವಹೇಳನ: ಸಾಮಾಜಿಕ ತಾಣಗಳಲ್ಲಿ ಭಾರೀ ಆಕ್ರೋಶ
ಬಂಟ್ವಾಳ ನಗರ ಠಾಣೆಗೆ ದೂರು

ಬಂಟ್ವಾಳ, ಫೆ.22: ಈಚಲು ಹಣ್ಣು ವ್ಯಾಪಾರಿಯೊಬ್ಬರ ಬಳಿ ಹಿಂದಿ ಭಾಷೆಯಲ್ಲಿ ಮಾತನಾಡುವ ವೀಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಿ ಅವಹೇಳನ ಮಾಡಿರುವ ವ್ಯಕ್ತಿಯೊಬ್ಬನ ಕ್ರಮ ಸಾಮಾಜಿಕ ತಾಣದಲ್ಲಿ ಸಾರ್ವತ್ರಿಕ ಆಕ್ರೋಶಕ್ಕೆ ಕಾರಣವಾಗಿದೆ.
ಬಿ.ಸಿ.ರೋಡ್ ಕೈಕಂಬದ ಪರ್ಲ್ಯ ನಿವಾಸಿ ಇಸ್ಮಾಯೀಲ್ ಎಂಬವರು ಬಿ.ಸಿ.ರೋಡ್ ನಾರಾಯಣ ಗುರು ವೃತ್ತದ ಸಮೀಪ ರಾಷ್ಟ್ರೀಯ ಹೆದ್ದಾರಿ 75ರ ಬದಿಯಲ್ಲಿ ಈಚಲು ಹಣ್ಣು ಮಾರುತ್ತಿದ್ದು, ಈಚಲು ಹಣ್ಣು ಖರೀದಿಗೆಂದು ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಇಸ್ಮಾಯೀಲ್‌ರಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡಿರುವುದನ್ನು ವೀಡಿಯೊ ಚಿತ್ರೀಕರಿಸಿ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಅನಕ್ಷರಸ್ಥ ಈಚಲು ಹಣ್ಣು ವ್ಯಾಪಾರಿಯಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡಿ ದರ್ಪ ತೋರಿಸಿದ್ದಲ್ಲದೆ, ಅದನ್ನು ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್ ಮಾಡಿ ಅವಹೇಳನ ಮಾಡಿರುವ ಆತನ ಕ್ರಮದ ವಿರುದ್ಧ ಸಾಮಾಜಿಕ ತಾಣದಲ್ಲೇ ಭಾರೀ ಆಕ್ರೋಶ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ಕಾರಿನಲ್ಲಿ ಬಂದ ವ್ಯಕ್ತಿ ಇಸ್ಮಾಯೀಲ್‌ರೊಂದಿಗೆ ಹಿಂದಿ ಭಾಷೆಯಲ್ಲಿ ಈಚಲು ಹಣ್ಣಿನ ಬೆಲೆ ಕೇಳುವುದು, ಅನಕ್ಷರಸ್ಥರಾದ ಇಸ್ಮಾಯೀಲ್ ಹಿಂದಿ ಭಾಷೆ ಅರಿಯದಿರುವುದರಿಂದ ಬ್ಯಾರಿಯಲ್ಲೇ ಉತ್ತರಿಸುವುದು, ತಾನು ಬ್ಯಾರಿ ಭಾಷೆಯಲ್ಲಿ ಉತ್ತರ ನೀಡುತ್ತಿದ್ದರೂ ಕಾರಿನಲ್ಲಿ ಬಂದವರಿಗೆ ಅರ್ಥವಾಗದಿರುವುದರಿಂದ ಇಸ್ಮಾಯೀಲ್‌ರವರು ಈಚಲು ಹಣ್ಣಿನ ಬೆಲೆಯನ್ನು ಕೈಯಲ್ಲಿ ಬರೆದು ತೋರಿಸುವು ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ. ಈಚಲು ಹಣ್ಣು ಖರೀದಿಗೆ ಬಂದಾತ ಬ್ಯಾರಿ ಭಾಷಿಗನಾಗಿದ್ದು, ವೀಡಿಯೊದ ಕೊನೆಯಲ್ಲಿ ಆತ ಇಸ್ಮಾಯೀಲ್‌ರೊಂದಿಗೆ ಸ್ಪಷ್ಟ ಬ್ಯಾರಿ ಭಾಷೆಯಲ್ಲಿ ಮಾತನಾಡಿದ್ದು ರೆಕಾರ್ಡ್ ಆಗಿದೆ. ಈ ಸಂದರ್ಭ ಕಾರಿನಲ್ಲಿ ಆತನ ಜೊತೆ ಮಹಿಳೆಯೊಬ್ಬಳು ಇದ್ದಿರುವುದು ಅವರೊಳಗಿನ ಸಂಬಾಷಣೆಯಲ್ಲಿ ವ್ಯಕ್ತವಾಗುತ್ತದೆ. ಆದರೆ ಕಾರಿನಲ್ಲಿದ್ದ ಯಾವುದೇ ಜನರ ಮುಖ ವಿಡಿಯೋದಲ್ಲಿ ಕಂಡುಬಂದಿಲ್ಲ.
ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವತ್ರಿಕ ಆಕ್ರೋಶ ವ್ಯಕ್ತವಾಗಿದೆ. ಬ್ಯಾರಿ ಭಾಷೆ ಗೊತ್ತಿದ್ದರೂ ಅವಹೇಳನ ಮಾಡುವ ಉದ್ದೇಶದಿಂದಲೇ ಹಿಂದಿ ಭಾಷೆಯಲ್ಲಿ ಮಾತನಾಡಿ ಅದನ್ನು ವೀಡಿಯೊ ಚಿತ್ರೀಕರಿಸಿ ತಾಮಾಜಿಕ ತಾಣಕ್ಕೆ ಅಪ್‌ಲೋಡ್ ಮಾಡಿರುವ ಬಗ್ಗೆ ಬಾರೀ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ ವೀಡಿಯೊ ಚಿತ್ರೀಕರಿಸಿದವನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಆಡಿಯೋಗಳು ಕೂಡಾ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
ನಗರ ಠಾಣೆಯಲ್ಲಿ ದೂರು: ಅವಹೇಳನ ಮಾಡುವ ಉದ್ದೇಶದಿಂದ ಹಿಂದಿ ಭಾಷೆಯಲ್ಲಿ ಮಾತನಾಡಿ ಅದನ್ನು ವೀಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣಕ್ಕೆ ಅಪ್‌ಲೋಡ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಬಿ.ಸಿ.ರೋಡ್ ಈಚಲು ಹಣ್ಣು ವ್ಯಾಪಾರಿ ಇಸ್ಮಾಯೀಲ್ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.







