ಮೊಬೈಲ್ ಕದ್ದಿಲ್ಲ ಎಂದು ಸಾಬೀತು ಪಡಿಸಲು ಮಕ್ಕಳಿಗೆ ಕುದಿಯುವ ಎಣ್ಣೆಗೆ ಕೈಮುಳುಗಿಸುವ ಶಿಕ್ಷೆ !

ರತ್ನಂ(ಮಧ್ಯಪ್ರದೇಶ), ಫೆ. 22: ಮೊಬೈಲ್ ಕದ್ದಿಲ್ಲ ಎನ್ನುವುದನ್ನು ಸಾಬೀತು ಪಡಿಸಲು ಕುದಿಯುವ ಎಣ್ಣೆಯಲ್ಲಿ ಕೈಮುಳುಗಿಸಿದ ಐದು ಮಕ್ಕಳು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ನರಸಿಂಗ್‌ಪಾಡ ಗ್ರಾಮದಲ್ಲಿ ಸೋಮವಾರ ಸಂಜೆ ಘಟನೆ ನಡೆದಿದೆ.
ನಿರಪರಾಧಿತ್ವವನ್ನು ಸಾಬೀತು ಪಡಿಸಲು ಕುದಿಯುವ ಎಣ್ಣೆಯಲ್ಲಿ ಕೈಮುಳುಗಿಸಬೇಕೆಂದು ಮೊಬೈಲ್ ಕಳಕೊಂಡ ವ್ಯಕ್ತಿಛಗನ್ ಲಾಲ್ ಎಂಬಾತ ಹೇಳಿದ್ದ. ಈತನ ಹದಿಮೂರು ವರ್ಷದ ಪುತ್ರನ ಮೊಬೈಲ್ ಕಳವಾಗಿತ್ತು.
ಐವರು ಮಕ್ಕಳನ್ನು ಈತ ಕುದಿಯುವ ತೈಲಕ್ಕೆ ಕೈಮುಳುಗಿಸುವಂತೆ ಮಾಡಿದ್ದ. ಎಂಟರಿಂದ ಹನ್ನೊಂದುವರ್ಷದೊಳಗಿನ ಗಂಡು ಮಕ್ಕಳು ಈ ಕ್ರೂರ ಶಿಕ್ಷೆಗೆ ತುತ್ತಾದರು. ಸ್ಥಳೀಯವಾಗಿರುವ ಅಂಧವಿಶ್ವಾಸದಂತೆ ಈ ಕ್ರೂರ ಕೃತ್ಯವನ್ನು ಈತ ಮಕ್ಕಳಲ್ಲಿ ಮಾಡಿಸಿದ್ದಾನೆ ಎನ್ನಲಾಗಿದೆ. ನಿರಪರಾಧಿಗಳಾದರೆ ಕುದಿಯುವ ಎಣ್ಣೆಯಲ್ಲಿ ಕೈ ಮುಳುಗಿಸಿದರೆ ಏನೂ ಆಗುವುದಿಲ್ಲ ಎಂದು ಈತ ಮಕ್ಕಳಿಗೆ ಹೇಳಿದ್ದ. ಛಗನ್‌ಲಾಲ್‌ನನ್ನು ಪೊಲೀಸರು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆಂದು ವರದಿಯಾಗಿದೆ.







