‘‘ಪೊಲೀಸರು ಮಲ ತಿನ್ನಿಸಿದರು, ಖಾಲಿ ಕಾಗದಗಳಿಗೆ ಸಹಿ ಮಾಡಿಸಿದರು’’
2005 ದಿಲ್ಲಿ ಸ್ಪೋಟದಲ್ಲಿ 12 ವರ್ಷಗಳ ಬಳಿಕ ದೋಷಮುಕ್ತ ಮೊಹಮ್ಮದ್ ಹುಸೇನ್ ಫಾಝಿಲಿ

ಶ್ರೀನಗರ, ಫೆ.22: ‘‘ಪೊಲೀಸರು ನಮ್ಮ ಬಾಯಿಗೆ ಮಲ ತುರುಕಿಸಿ, ನಂತರ ರೋಟಿ ಹಾಗೂ ನೀರನ್ನು ನೀಡಿ ನಾವು ಅದನ್ನು ನುಂಗುವಂತೆ ಮಾಡಿದ್ದರು’’ ಎಂದು ತಾವು 50 ದಿನಗಳ ಕಾಲ ಪೊಲೀಸ್ ರಿಮಾಂಡಿನಲ್ಲಿದ್ದಾಗಿನ ಭಯಾನಕ ಅನುಭವವನ್ನು ಸುರುಳಿಸುರುಳಿಯಾಗಿ ಬಿಚ್ಚಿಡುತ್ತಾರೆ 42 ವರ್ಷದ ಮುಹಮ್ಮದ್ ಹುಸೈನ್ ಫಾಝಿಲಿ.
2005ರ ದಿಲ್ಲಿ ಸ್ಫೋಟದಲ್ಲಿ ಆರೋಪಿಯಾಗಿ ಬಂಧಿಸಲ್ಪಟ್ಟಿದ್ದ ಅವರು 12 ವರ್ಷಗಳ ಜೈಲುವಾಸದ ಬಳಿಕ ಕಳೆದ ಶನಿವಾರ ಶ್ರೀನಗರದಲ್ಲಿರುವ ತಮ್ಮ ಮನೆಗೆ ಮರಳಿದ್ದಾರೆ. ಫಾಝಿಲ್ ಹಾಗೂ ಈ ಪ್ರಕರಣದ ಇನ್ನೊಬ್ಬ ಆರೋಪಿ ಮುಹಮ್ಮದ್ ರಫೀಕ್ ಶಾಹ್ ಕಳೆದ ವಾರವಷ್ಟೇ ದಿಲ್ಲಿ ಕೋರ್ಟಿನಿಂದ ದೋಷಮುಕ್ತಗೊಂಡಿದ್ದರು. ತಪ್ಪು ಮಾಡಿದ್ದೇವೆಂದು ಒಪ್ಪಿಕೊಳ್ಳುವ ಸಲುವಾಗಿ ಪೊಲೀಸರು ತಮ್ಮನ್ನು ಸರ್ವ ವಿಧದಲ್ಲೂ ಹಿಂಸಿಸಿದ್ದರು ಎಂದು ಅವರು ವಿವರಿಸುತ್ತಾರೆ.
‘‘ನಮ್ಮ 50 ದಿನಗಳ ಕಾಲದ ಯಾತನೆ ತಮ್ಮನ್ನು ತಿಹಾರ್ ಜೈಲಿಗೆ ಸೇರಿಸಿದ ನಂತರ ಅಂತ್ಯಗೊಂಡಿತು. ನಂತರ ನಮ್ಮನ್ನು ಯಾರೂ ಹಿಂಸಿಸದೇ ಇದ್ದರೂ ಜೈಲಿನಲ್ಲಿರುವ ಇತರ ಕೈದಿಗಳಿಂದ ಹಲ್ಲೆಗೊಳಗಾಗುವ ಭಯವಿತ್ತು’’ ಎಂದು ಅವರು ಹೇಳಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿರುವ ವೇಳೆ ಪೊಲೀಸರು ತಮ್ಮಿಂದ ಸುಮಾರು 200 ಖಾಲಿ ಹಾಳೆಗಳಿಗೆ ಬಲವಂತವಾಗಿ ಸಹಿ ಹಾಕಿಸಿದ್ದರು ಎಂದು ಹೇಳಿದ ಅವರು, ‘‘ನಾವು ನಿರ್ದೋಷಿಗಳು ಎಂದು ತಮಗೆ ತಿಳಿದಿದೆಯೆಂದು ಹೇಳುತ್ತಿದ್ದ ಪೊಲೀಸರು ನಮ್ಮನ್ನು ದೋಷಿಗಳನ್ನಾಗಿಸಲು ಅವರ ಬಳಿ ನೂರು ವಿಧಗಳಿತ್ತು ಎಂದು ಹೇಳಿಕೊಳ್ಳುತ್ತಿದ್ದರು’’ ಎಂದು ನೆನಪಿಸಿಕೊಂಡಿದ್ದಾರೆ.
ಇನ್ನೊಂದು ಪೊಲೀಸ್ ಹಿಂಸೆಯ ಘಟನೆಯ ಬಗ್ಗೆ ಹೇಳಿದ ಅವರು, ‘‘ಪೊಲೀಸರು ಲೋಧಿ ಕಾಲನಿ ಠಾಣೆಯಲ್ಲಿ ಬೆಂಚೊಂದರಲ್ಲಿ ನನ್ನನ್ನು ಮಲಗಿಸಿದ್ದರು. ನಂತರ ಇಬ್ಬರು ನನ್ನ ಕಾಲು ಹಾಗೂ ಹೊಟ್ಟೆಯ ಮೇಲೆ ನಡೆದರು. ಇನ್ನೊಬ್ಬ ಡಿಟರ್ಜೆಂಟ್ ಹಾಕಲ್ಪಟ್ಟ ನೀರನ್ನು ನನಗೆ ಬಲವಂತವಾಗಿ ಕುಡಿಸಿದ್ದ’’ ಎಂದು ಹೇಳುತ್ತಾರೆ.
ನ್ಯಾಯಾಧೀಶರ ಮುಂದೆ ಹಾಜರುಪಡಿಸುವಾಗ ಸತ್ಯವೇನಾದರೂ ಹೇಳಿದರೆ ಇದಕ್ಕಿಂತಲೂ ಹೆಚ್ಚಿನ ಹಿಂಸೆ ನೀಡುವುದಾಗಿಯೂ ಬೆದರಿಸಿದ್ದರು ಎಂದು ವೃತ್ತಿಯಲ್ಲಿ ಶಾಲುಗಳನ್ನು ನೇಯುವವರಾದ ಫಾಝಿಲಿ ಹೇಳುತ್ತಾರೆ.







