ಯುವ ನಟಿಗೆ ಕಿರುಕುಳ ನೀಡಿದ ಆ ನಟ ನಾನಲ್ಲ: ದಿಲೀಪ್

ತಿರುವನಂತಪುರಂ, ಫೆ. 22: ಯುವ ನಟಿಗೆ ಕಿರುಕುಳ ನೀಡಿದ ಘಟನೆಗೆ ತನ್ನ ಹೆಸರನ್ನು ಜೋಡಿಸಲಾಗುತ್ತಿರುವುದನ್ನು ನಟ ದಿಲೀಪ್ ಬಲವಾಗಿ ವಿರೋಧಿಸಿದ್ದಾರೆ. ತನ್ನ ಮನೆಗೆ ಯೂನಿಫಾರ್ಮ್ ಅಥವಾ ಮಫ್ತಿಯಲ್ಲಿ ಪೊಲೀಸರು ಬಂದಿಲ್ಲ. ಈ ರೀತಿ ನಡೆಯುತ್ತಿರುವ ಪ್ರಚಾರ ಆಧಾರ ರಹಿತವಾದದ್ದು ಎಂದು ದಿಲೀಪ್ ವೆಬ್ ಪೋರ್ಟಲೊಂದಕ್ಕೆ ತಿಳಿಸಿದ್ದಾರೆ.
"ನನ್ನ ಹೆಸರನ್ನು ಈ ಪ್ರಕರಣದಲ್ಲಿ ಎಳೆದು ತರಲಾಗುತ್ತಿದೆ. ಇದೊಂದು ಸಂಚು. ಆಲಪ್ಪುಝದ ಆ ನಟ ಯಾರೆಂದು ಮಾಹಿತಿ ಕೊಟ್ಟ ಮಾಧ್ಯಮಗಳೇ ಬಹಿರಂಗಪಡಿಸಬೇಕು. ನನ್ನ ಮನಗೆ ಪೊಲೀಸ್ ಬಂದಿಲ್ಲ. ನನ್ನನ್ನು ಪ್ರಶ್ನಿಸಿಲ್ಲ. ಆಧಾರ ರಹಿತ ವಾಸ್ತವಕ್ಕೆ ವಿರುದ್ಧ ಸುದ್ದಿಗಳವು. ನನ್ನ ವಿರುದ್ಧ ಸಂಘಟಿತ ಆಕ್ರಮಣ ಇದರ ಹಿಂದಿದೆ" ಎಂದು ದಿಲೀಪ್ ಪ್ರತಿಕ್ರಿಯಿಸಿದ್ದಾರೆ.
"ನೀವು ಪೊಲೀಸರೊಡನೆ ಕೇಳಿ ನೋಡಿ, ಆ ನಟ ನಾನು ಆಗಿರುವೇನೇ ಎಂದು. ಆನಂತರ ಸುದ್ದಿ ಮಾಡಿದರೆ ಸಾಕು. ಆ ನಟ ಯಾರು ಎಂದು ತನಿಖೆ ಮಾಡಿ ಪತ್ತೆ ಹಚ್ಚಬೇಕು. ಅದನ್ನು ಬಿಟ್ಟು ಊಹಾಪೋಹಗಳ ಆಧಾರದಲ್ಲಿ ವರದಿ ಮಾಡಬಾರದು" ಎಂದು ದಿಲೀಪ್ ಹೇಳಿದ್ದಾರೆಂದು ವರದಿಯಾಗಿದೆ.





