ಇಸ್ರೇಲ್ ನ ಉಚಿತ ವಿಲಾಸಿ ಪ್ರವಾಸ ಕೊಡುಗೆಯನ್ನು ತಿರಸ್ಕರಿಸಿದ ಲಿಯೊನಾರ್ಡೊ

ಜೆರುಸಲೇಮ್,ಫೆ.22 : ಕಳೆದ ವರ್ಷ ಲಿಯೊನಾರ್ಡೊ ಡಿ ಕಾಪ್ರಿಯೊ, ಮ್ಯಾಟ್ ಡೇಮನ್ ಮತ್ತಿತರ ಹಾಲಿವುಡ್ ನಟರಿಗೆ ಎಲ್ಲಾ ವೆಚ್ಚಗಳನ್ನೂ ಭರಿಸಲ್ಪಟ್ಟ ವಿಲಾಸಿ ಪ್ರವಾಸದ ಕೊಡುಗೆಯನ್ನು ಇಸ್ರೇಲ್ ನೀಡಿದ್ದರೂ ಯಾರೊಬ್ಬರೂ ಈ ಕೊಡುಗೆಯನ್ನು ಉಪಯೋಗಿಸಿಲ್ಲ. ಒಟ್ಟು 26 ಆಸ್ಕರ್ ಪ್ರಶಸ್ತಿ ವಿಜೇತರಿಗೆ ಈ ರೂ. 36 ಲಕ್ಷ ಮೌಲ್ಯದ ಉಚಿತ ಪ್ರವಾಸದ ಕೊಡುಗೆಯನ್ನುನೀಡಿದ್ದರೂ ಅದು ಫಲ ಕಂಡಿಲ್ಲ.
ಮಾರ್ಕೆಟಿಂಗ್ ಕಂಪೆನಿಯೊಂದು ನೀಡಿದ 2 ಲಕ್ಷ ಮೌಲ್ಯದ ಉಡುಗೊರೆಗಳ ಭಾಗವಾಗಿ ಈ ಪ್ರವಾಸ ಕೊಡುಗೆಯನ್ನು2016ರ ಆಸ್ಕರ್ ಪ್ರದಾನ ಸಮಾರಂಭದ ನಂತರದ ದಿನಗಳಲ್ಲಿ ನೀಡಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಕೊಡುಗೆಯಂಗವಾಗಿ ಅತ್ಯಂತ ದುಬಾರಿ ಟಾಯ್ಲೆಟ್ ಪೇಪರ್ ಕೂಡ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಫೆಲೆಸ್ತೀನಿ ಪ್ರದೇಶಗಳಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಮರೆಮಾಚಲು ಇಸ್ರೇಲ್ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ದೂರಲಾಗಿತ್ತು.

ಈ ವರ್ಷದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 26ರಂದು ನಡೆಯಲಿದ್ದು ಅದಕ್ಕೆ ಕ್ಷಣಗಣನೆ ಆರಂಭಗೊಳ್ಳುತ್ತಿರುವಂತೆಯೇ ಕಳೆದ ವರ್ಷದ ಕೊಡುಗೆಯನ್ನು ಯಾರೂ ಉಪಯೋಗಿಸಿಲ್ಲ ಎಂದು ತಿಳಿದು ಬಂದಿದೆ.
ಹಂಗರ್ ಗೇಮ್ಸ್ ನಟಿ ಜೆನ್ನಿಫರ್ ಲಾರೆನ್ಸ್ ಕೊಡುಗೆಯನ್ನು ಸ್ವೀಕರಿಸಿದ್ದರೂ ಅದನ್ನು ತನ್ನ ಹೆತ್ತವರಿಗೆ ನೀಡಿದ್ದಾರೆಂದು ಕಂಪೆನಿ ಹೇಳಿಕೊಂಡಿದೆ. ಫೆಲೆಸ್ತೀನೀಯರ ಹಕ್ಕುಗಳಿಗಾಗಿ ನಡೆಸಲಾಗುತ್ತಿರುವ ಅಭಿಯಾನದ ಯೂಸುಫ್ ಮುನಯ್ಯರ್ ಮೇಲಿನ ಬೆಳವಣಿಗೆಯಿಂದ ಸಂತುಷ್ಟರಾಗಿದ್ದಾರೆ. ನಟರ ಮೂಲಕ ಇಸ್ರೇಲನ್ನು ವೈಟ್ ವಾಶ್ ಮಾಡುವ ಯತ್ನ ವಿಫಲವಾಗಿದೆ ಎಂದು ಇದರಿಂದ ತಿಳಿದು ಬರುತ್ತದೆ, ಎಂದು ಅವರು ಹೇಳಿದ್ದಾರೆ.
ಆದರೆ ಇಸ್ರೇಲಿನ ಪ್ರವಾಸೋದ್ಯಮ ಸಚಿವಾಲಯ ಈ ವಿಚಾರದಲ್ಲಿ ಪ್ರತಿಕ್ರಿಯಿಸಲು ನಿರಾಕರಿಸಿದೆ.







