ಲಕ್ಸುರಿ ಕಾರು ತ್ಯಜಿಸಿ ರೈಲಲ್ಲಿ ಪ್ರಯಾಣಿಸಿದ ಧೋನಿ

ಕೋಲ್ಕತಾ, ಫೆ.22: ಭಾರತ ಮಾಜಿ ನಾಯಕ ಎಂಎಸ್ ಧೋನಿ ವಿಜಯ ಹಝಾರೆ ಟ್ರೋಫಿಯಲ್ಲಿ ಭಾಗವಹಿಸಲು ತವರು ಪಟ್ಟಣ ರಾಂಚಿಯಿಂದ ಕೋಲ್ಕತಾಕ್ಕೆ ತನ್ನ ಲಕ್ಸುರಿ ಕಾರಿನಲ್ಲಿ ತೆರಳದೇ ಸಹ ಆಟಗಾರರೊಂದಿಗೆ ಸರಳವಾಗಿ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಸಹ ಆಟಗಾರರೊಂದಿಗೆ ಆನಂದಿಸುತ್ತಾ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಪರೂಪದ ಫೋಟೊವನ್ನು ಧೋನಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
ಧೋನಿ ಸಾಮಾನ್ಯವಾಗಿ ತನ್ನ ಲಕ್ಸುರಿ ಕಾರಿನಲ್ಲಿ ಪ್ರಯಾಣಿಸುತ್ತಾರೆ. ಈ ಬಾರಿ ರೈಲಿನ ಪ್ರಥಮ ದರ್ಜೆಯ ಎಸಿ ಬೋಗಿಯಲ್ಲಿ ಹಾಟಿಯಾದಿಂದ ಹೌರಾಕ್ಕೆ ಜಾರ್ಖಂಡ್‌ನ ಸಹ ಆಟಗಾರರರೊಂದಿಗೆ ಪ್ರಯಾಣ ಬೆಳೆಸಿದ್ದಾರೆ.
‘‘ನಾನು 13 ವರ್ಷಗಳ ಬಳಿಕ ರೈಲಿನಲ್ಲಿ ಪ್ರಯಾಣಿಸಿದ್ದೇನೆ. ಇದು ತುಂಬಾ ದೀರ್ಘ ಪ್ರಯಾಣವಾಗಿತ್ತು. ಪ್ರಯಾಣದ ವೇಳೆ ಸಹ ಆಟಗಾರರೊಂದಿಗೆ ಮಾತನಾಡುತ್ತಾ, ಹರಟುತ್ತಾ ಆನಂದಿಸಿದ್ದೇನೆ’’ ಎಂದು ಧೋನಿ ನುಡಿದರು.
ಧೋನಿ ಪ್ರಸ್ತುತ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಯಾವುದೇ ಪಂದ್ಯ ಆಡುತ್ತಿಲ್ಲವಾದ ಕಾರಣ ರಾಷ್ಟ್ರೀಯ ತಂಡದಿಂದ ದೂರವುಳಿದಿದ್ದಾರೆ. ಹಾಗಂತ ಧೋನಿ ಕ್ರಿಕೆಟ್ ಮೈದಾನದಿಂದ ದೂರವುಳಿದಿಲ್ಲ. ಧೋನಿ ಭಾರತದ ಪ್ರಮುಖ ಏಕದಿನ ಟೂರ್ನಿ ಮುಂಬರುವ ವಿಜಯ ಹಝಾರೆ ಟ್ರೋಫಿಯಲ್ಲಿ ಜಾರ್ಖಂಡ್ ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಧೋನಿ ನೇತೃತ್ವದ ಜಾರ್ಖಂಡ್ ತಂಡ ಕೋಲ್ಕತಾದ ಈಡನ್‌ಗಾರ್ಡನ್ಸ್‌ನಲ್ಲಿ ಫೆ.25 ರಂದು ನಡೆಯಲಿರುವ ವಿಜಯ ಹಝಾರೆ ಟ್ರೋಫಿಯ ತನ್ನ ಮೊದಲ ಪಂದ್ಯದಲ್ಲಿ ಕರ್ನಾಟಕವನ್ನು ಎದುರಿಸಲಿದೆ. ಧೋನಿ ಕಳೆದ ವರ್ಷ ಜಾರ್ಖಂಡ್ ಪರ ವಿಜಯ ಹಝಾರೆ ಟ್ರೋಫಿಯನ್ನು ಆಡಿದ್ದರು. ಆದರೆ, ತಂಡದ ನಾಯಕನಾಗಿ ಆಯ್ಕೆಯಾಗಿರಲಿಲ್ಲ. ಐಪಿಎಲ್ ಫ್ರಾಂಚೈಸಿ ಪುಣೆ ತಂಡ ಧೋನಿಯವರನ್ನು ನಾಯಕತ್ವದಿಂದ ಮುಕ್ತಿಗೊಳಿಸಿದ ಎರಡು ದಿನಗಳ ಬಳಿಕ ಜಾರ್ಖಂಡ್‌ನ ನಾಯಕನಾಗಿ ಧೋನಿ ಆಯ್ಕೆಯಾಗಿದ್ದರು.
ಧೋನಿ ಜನವರಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದರು. ಆದರೆ, ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿ ಮುಂದುವರಿಯುವುದಾಗಿ ಘೋಷಿಸಿದ್ದರು. ಧೋನಿ ಅವರು ಇಂಗ್ಲೆಂಡ್ ವಿರುದ್ಧ ಏಕದಿನ ಹಾಗೂ ಟ್ವೆಂಟಿ-20 ಸರಣಿಯನ್ನು ಆಡಿದ್ದು, ಕೊಹ್ಲಿ ನಾಯಕತ್ವದ ಭಾರತ ಎರಡೂ ಸರಣಿಯನ್ನು ಜಯಿಸಿತ್ತು.







