ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನಾಗಿರುವ ಫಾರ್ಮಸಿಸ್ಟ್ !

ಚಿತ್ರಕೂಟ್,ಫೆ.22 : ಉತ್ತರ ಪ್ರದೇಶದ ಚಿತ್ರಕೂಟ್ ಜಿಲ್ಲೆಯ ಉನ್ಚಡಿಹ್ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿನವೊಂದಕ್ಕೆ ಸರಾಸರಿ 50 ಮಂದಿ ರೋಗಿಗಳು ಭೇಟಿ ನೀಡುತ್ತಾರೆ. ಅವರೆಲ್ಲರನ್ನೂ ಪರೀಕ್ಷಿಸಿ ಅವರಿಗೆ ಔಷಧಿ ನೀಡಲು ಆ ಪ್ರಾಥಮಿಕ ಕೇಂದ್ರದಲ್ಲಿ ಕೇವಲ ಒಬ್ಬ ಉದ್ಯೋಗಿ ಮಾತ್ರ ಇದ್ದಾರೆ. ಅವರೇ ಎಚ್ ಆರ್ ಸಿಂಗ್. ರೋಗಿಗಳನ್ನು ಪರೀಕ್ಷಿಸಿ ಔಷಧಿ ನೀಡುವವರು ಅವರೇ. ಅಂದ ಹಾಗೆ ಅವರು ವೈದ್ಯರಲ್ಲ. ಬದಲಾಗಿ ಅಲ್ಲಿನ ಫಾರ್ಮಸಿಸ್ಟ್. ಈ ಕೇಂದ್ರಕ್ಕೆ ವೈದ್ಯರ ನೇಮಕಾತಿ ಆಗದ ಕಾರಣ ಅವರೇ ಜ್ವರ, ಶೀತ ಮುಂತಾದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಔಷಧ ನೀಡುತ್ತಾರೆ. ಸುತ್ತಮುತ್ತಲಿನ 10 ಕಿಮೀ ದೂರದ ಗ್ರಾಮಗಳಿಗೆ ಇದೊಂದೇ ಪ್ರಾಥಮಿಕ ಆರೋಗ್ಯ ಕೇಂದ್ರ.
ಮುಂದಿನ ಎರಡು ದಿನಗಳಲ್ಲಿ ಸಿಂಗ್ ಕೂಡ ಈ ಕೇಂದ್ರದಲ್ಲಿ ರೋಗಿಗಳನ್ನು ಪರೀಕ್ಷಿಸಲು ಸಾಧ್ಯವಿಲ್ಲ. ಅವರನ್ನು ಅಲ್ಲಿಂದ 12 ಕಿಮೀ ದೂರದ ಕರ್ವಿ ಎಂಬಲ್ಲಿಗೆ ಚುನಾವಣಾ ಕರ್ತವ್ಯಕ್ಕಾಗಿ ನೇಮಿಸಲಾಗಿದೆ. ಅವರ ಆರೋಗ್ಯ ಕೇಂದ್ರದಲ್ಲಿ ವೈದ್ಯರೂ ಸೇರಿದಂತೆ ಒಟ್ಟು ಆರು ಮಂದಿ ಸಿಬ್ಬಂದಿ ಇರಬೇಕಾಗಿದ್ದರೂ ಅಲ್ಲಿ ಅವರನ್ನು ಬಿಟ್ಟರೆ ಬೇರೆ ಯಾರೂ ಇಲ್ಲ.
ಕೇಂದ್ರಕ್ಕೆ ಹಲವು ಕೊಠಡಿಗಳಿರುವ ಹೊಸ ಕಟ್ಟಡವನ್ನು ಕೆಲ ವರ್ಷಗಳ ಹಿಂದೆ ನಿರ್ಮಿಸಲಾಗಿದೆಯಾದರೂ ಸೂಕ್ತ ಸಿಬ್ಬಂದಿಯಿಲ್ಲದೆ ಈ ಕಟ್ಟಡ ಪಾಳು ಬಿದ್ದಿದೆ.
ಇಲ್ಲಿಂದ ಸುಮಾರು 30 ಕಿಮೀ ದೂರದ ಸರಯ್ಯ ಆರೋಗ್ಯ ಕೇಂದ್ರದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಸುತ್ತಲಿನ ಸುಮಾರು 50,000 ಜನಸಂಖ್ಯೆಗೆ ಇದೊಂದೇ ಆರೋಗ್ಯ ಕೇಂದ್ರವಾಗಿದ್ದರೂ ಇಲ್ಲಿಯೂ ವೈದ್ಯರಿಲ್ಲ. ಫಾರ್ಮಸಿಸ್ಟ್ ಬಲರಾಜ್ ಸಿಂಗ್ ಅವರೇ ವೈದ್ಯರ ಕರ್ತವ್ಯಗಳನ್ನು ನಿರ್ವಹಿಸಿ ದಿನವೊಂದಕ್ಕೆ ಕನಿಷ್ಠ 100 ರೋಗಿಗಳನ್ನು ಪರೀಕ್ಷಿಸುತ್ತಾರೆ.







