ಯುವತಿಗೆ ಲೈಂಗಿಕ ಶೋಷಣೆ ಆರೋಪದಲ್ಲಿ ಬಿಹಾರ ಕಾಂಗ್ರೆಸ್ ಉಪಾಧ್ಯಕ್ಷನ ರಾಜೀನಾಮೆ

ಪಾಟ್ನಾ,ಫೆ.22: ಪಾಟ್ನಾದ ಯುವತಿಯೋರ್ವಳನ್ನು ಲೈಂಗಿಕವಾಗಿ ಶೋಷಿಸಿದ ಆರೋಪದಲ್ಲಿ ಬಿಹಾರ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಬೃಜೇಶ ಕುಮಾರ್ ಯಾನೆ ಬೃಜೇಶ ಪಾಂಡೆ ಬುಧವಾರ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಮುಖ್ಯ ಆರೋಪಿ ನಿಖಿಲ್ ಪ್ರಿಯದರ್ಶಿ ಜೊತೆಗೆ ಪಾಂಡೆ ಹೆಸರನ್ನೂ ಸೇರಿಸಲಾಗಿದೆ. ಸಂತ್ರಸ್ತ ಬಾಲಕಿ ಕಾಂಗ್ರೆಸ್‌ನವರೇ ಆಗಿರುವ ಮಾಜಿ ರಾಜ್ಯ ಸಚಿವರೋರ್ವರ ಪುತ್ರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಿಯದರ್ಶಿ ಮದುವೆಯಾಗುವುದಾಗಿ ಭರವಸೆ ನೀಡಿ ತನ್ನನ್ನು ವಂಚಿಸಿದ್ದಲ್ಲದೆ ಸಹ ಆರೋಪಿಯಾಗಿರುವ ತನ್ನ ಸೋದರ ಮತ್ತು ಪಾಂಡೆ ಜೊತೆ ಸೇರಿಕೊಂಡು ತನ್ನನ್ನು ಬ್ಲಾಕ್‌ಮೇಲ್ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಪ್ರಿಯದರ್ಶಿ ಮತ್ತು ಇನ್ನೋರ್ವ ಆರೋಪಿ ತಮ್ಮ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಇತ್ತೀಚಿಗೆ ತಿರಸ್ಕರಿಸಿದ ಬಳಿಕ ತಲೆಮರೆಸಿಕೊಂಡಿದ್ದಾರೆ.
ಯುವತಿ ಮಂಗಳವಾರ ಸ್ಥಳೀಯ ಟಿವಿ ಚಾನೆಲ್‌ಗಳಲ್ಲಿ ಪ್ರತ್ಯಕ್ಷಳಾಗಿ ಬಹಿರಂಗವಾಗಿ ಆರೋಪ ಮಾಡಿದ್ದಳು.
ಪಾಂಡೆಯವರನ್ನು ದೊಡ್ಡ ನಾಯಕನೆಂದು ತನಗೆ ಪರಿಚಯಿಸಲಾಗಿತ್ತು. ಅವರು ತನ್ನನ್ನು ಬೆದರಿಸುತ್ತಿದ್ದರು ಎಂದಿರುವ ಯುವತಿ, ಅವರು ಸೆಕ್ಸ್ ಜಾಲವೊಂದರಲ್ಲಿ ಭಾಗಿಯಾಗಿದ್ದಾರೆ ಎಂದೂ ಆರೋಪಿಸಿದ್ದಾಳೆ.
ತನ್ನ ವಿರುದ್ಧ ಆರೋಪಗಳು ಟಿವಿ ಚಾನೆಲ್‌ಗಳಲ್ಲಿ ಪ್ರಸಾರಗೊಂಡ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷತೆಗೆ ರಾಜೀನಾಮೆ ಸಲ್ಲಿಸಿರುವ ಪಾಂಡೆ,ತನ್ನಿಂದಾಗಿ ಪಕ್ಷಕ್ಕೆ ಯಾವುದೇ ತೊಂದರೆಯಾಗುವುದನ್ನು ತಾನು ಬಯಸುವುದಿಲ್ಲ ಎಂದು ಹೇಳಿಕೊಂಡಿ ದ್ದಾರೆ.
ತಾನು ಅಮಾಯಕ ಎಂದು ರಾಜೀನಾಮೆ ಪತ್ರದಲ್ಲಿ ಹೇಳಿರುವ ಅವರು, ಯುವತಿ ಪ್ರಿಯದರ್ಶಿ ಮತ್ತು ಆತನ ಕುಟುಂಬದ ವಿರುದ್ಧ ಆರೋಪಿಸುತ್ತಿದ್ದಳು. ಅವಳು ತನ್ನನ್ನೇಕೆ ಹೆಸರಿಸಿದ್ದಾಳೆ ಎನ್ನುವುದು ತನಗೆ ಗೊತ್ತಿಲ್ಲ. ಯಾರಿಗಾಗಿಯೋ ತನ್ನನ್ನು ಉದ್ದೇಶ ಪೂರ್ವಕವಾಗಿ ಬಲಿಪಶುವನ್ನಾಗಿಸಲಾಗಿದೆ ಎಂದಿದ್ದಾರೆ.