ಮಂಗಳೂರು ಬಂದ್ ಕರೆಗೆ ಕೋಮು ಸೌಹಾರ್ದ ವೇದಿಕೆ ಖಂಡನೆ

ಮಂಗಳೂರು, ಫೆ.22: ಮಂಗಳೂರಿನಲ್ಲಿ ಫೆ.25ರಂದು ನಡೆಯುವ ಸೌಹಾರ್ದ ರ್ಯಾಲಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮಿಸುವುದನ್ನು ವಿರೋಧಿಸಿ ಸಂಘ ಪರಿವಾರದ ಸಂಘಟನೆಗಳು ಮಂಗಳೂರು ಬಂದ್ ಗೆ ಕರೆ ನೀಡಿದ್ದನ್ನು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ದ.ಕ. ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.
ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ದೇಶದ ರಾಜ್ಯವೊಂದರ ಮುಖ್ಯಮಂತ್ರಿಯೊಬ್ಬರು ನಮ್ಮ ರಾಜ್ಯಕ್ಕೆ ಆಗಮಿಸುವುದನ್ನು ವಿರೋಧಿಸಿ ಬಂದ್ ಗೆ ಕರೆಕೊಟ್ಟ ಸಂಘ ಪರಿವಾರದ ನಡೆ ಅದರ ಅಸಹಿಷ್ಣುತೆ ಮತ್ತು ಹತಾಶೆಯನ್ನು ಬಿಂಬಿಸುತ್ತದೆ. ಪ್ರತಿಭಟಿಸುವ ಹಕ್ಕು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಇದೆ. ಆದರೆ ಯಾವುದೇ ಕಾರಣಕ್ಕೂ ಜಿಲ್ಲೆಗೆ ಬರಲು ಬಿಡಲಾರೆವು ಎಂಬ ಅವರ ವಾದ ಅಕ್ಷಮ್ಯ. ಅದು ಈ ದೇಶದ ಪ್ರಜೆಯೊಬ್ಬನ ಸಂವಿಧಾನ ದತ್ತವಾದ ಮೂಲಭೂತ ಹಕ್ಕಿನ ಮೇಲಿನ ದಾಳಿ ಎಂದು ಕೋ.ಸೌ.ವೇ ಹೇಳಿದೆ.
ಮಂಗಳೂರು ಕೇವಲ ಸಂಘ ಪರಿವಾರದವರಿಗೆ ಸೇರಿದ್ದಲ್ಲ. ಇಲ್ಲಿಗೆ ಯಾರಾದರೂ ಬರದಂತೆ ತಡೆಯುವ ಹಕ್ಕು ಯಾರಿಗೂ ಇಲ್ಲ. ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸೌಹಾರ್ದ ರ್ಯಾಲಿಗೆ ತಡೆಯೊಡ್ಡುವ ಬೆದರಿಕೆ ಹಾಕಿದ ಸಂಘ ಪರಿವಾರದ ಗೂಂಡಾಗಳನ್ನು ಮುಂಜಾಗರೂಕತಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಬೇಕು ಮತ್ತು ಕಾನೂನು ಸುವಸ್ಥೆ ಕಾಪಾಡಿ ಜಿಲ್ಲೆಯ ಶಾಂತಿ ಸೌಹಾರ್ದ ನೆಲೆಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುರೇಶ್ ಭಟ್ ಬಾಕ್ರಬೈಲ್ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.







