ವಿಭಿನ್ನ ಕೋಮಿನ ವಿದ್ಯಾರ್ಥಿನಿಯರು ಮನೆಯೊಳಗಿದ್ದ ವಿಚಾರ: ಕಡಬ ಠಾಣೆಯಲ್ಲಿ ದೂರು - ಪ್ರತಿ ದೂರು
ಕಡಬ, ಫೆ.22: ಅನ್ಯಕೋಮಿನ ವಿದ್ಯಾರ್ಥಿನಿಯ ಮನೆಯಲ್ಲಿ ಆಕೆಯ ಸ್ನೇಹಿತೆಯರಾದ ಹಿಂದೂ ವಿದ್ಯಾರ್ಥಿನಿಯರಿದ್ದ ವಿಚಾರದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಮನೆಗೆ ಮುತ್ತಿಗೆ ನಡೆಸಿದ್ದಾರೆ ಎಂದು ಮನೆಯೊಡತಿ ಬುಧವಾರದಂದು ಕಡಬ ಠಾಣೆಗೆ ದೂರು ನೀಡಿದ್ದಾರೆ.
ಶರತ್ ಭಂಡಾರಿ, ಪ್ರಶಾಂತ್, ದಿವಾಕರ, ರಕ್ಷಿತ್ ಕೊಲ, ಸುದರ್ಶನ್, ಕೃಷ್ಣ ರಾಮಕುಂಜ, ಜೀಪು ಚಾಲಕ ಪುಟ್ಟ ಸೇರಿದಂತೆ ಇತರರು ಮಂಗಳವಾರದಂದು ಸಾಯಂಕಾಲ ಏಕಾಏಕಿ ಮನೆಗೆ ಮುತ್ತಿಗೆ ಹಾಕಿ ಹಲ್ಲೆಗೆ ಯತ್ನಿಸಿರುವುದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರತಿದೂರು:
ಈ ಮಧ್ಯೆ ಇದೇ ವಿಚಾರವಾಗಿ ರಾಮಕುಂಜ ಬೈರಕೆಂಡ ನಿವಾಸಿ ದಿ ತಿಮ್ಮಪ್ಪ ಮೂಳ್ಯ ಎಂಬವರ ಪುತ್ರ ನವೀನ್ ಎಂಬವರು ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ಬರುತ್ತಿರುವಾಗ ಬಶೀರ್, ಅರಾಫತ್, ತೌಸೀಫ್, ಶರೀಫ್, ಸಿರಾಜ್ ಹಾಗೂ ಹೈದರ್ ಎಂಬವರು ತನಗೆ ಹಲ್ಲೆ ನಡೆಸಿದ್ದು, ಜೀವಬೆದರಿಕೆಯೊಡ್ಡಿದ್ದಾರೆಂದು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ತಂಡದವರಿಂದಲೂ ದೂರು ದಾಖಲಿಸಿಕೊಂಡಿರುವ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.







