ಮಂಗಳೂರು: ನ್ಯಾಯಾಲಯಕ್ಕೆ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಜಿಲ್ಲಾ ಬಿಎಸ್‌ಪಿ ಆಗ್ರಹ
ಮಂಗಳೂರು,ಫೆ. 22: ಎಸ್ಸಿ, ಎಸ್ಟಿ ಸರಕಾರಿ ನೌಕರರಿಗೆ ಬಡ್ತಿಯಲ್ಲಿ ಶೇ.3 ಮೀಸಲಾತಿ ನೀಡುವ ರಾಜ್ಯ ಸರಕಾರದ ಕಾಯ್ದೆಯು ಸರಿಯಾದ ಪ್ರಕ್ರಿಯೆಯಲ್ಲಿಲ್ಲ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್ ಅದನ್ನು ರದ್ದುಗೊಳಿಸಿದೆ. ಹೀಗಾಗಿ ಸರಕಾರವು ನ್ಯಾಯಾಲಯಕ್ಕೆ ಮರು ಪರಿಶೀಲನಾ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಬಿಎಸ್‌ಪಿ ಪಕ್ಷ ಆಗ್ರಹಿಸಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಮುಖಂಡ ರಘು ಧರ್ಮಸೇನ್ ಸರಕಾರವು ಈ ಕುರಿತು ಮರುಪರಿಶೀಲನಾ ಅರ್ಜಿ ಹಾಕದಿದ್ದರೆ ಭಡ್ತಿ ಹೊಂದಿರುವ ಎಸ್ಸಿ, ಎಸ್ಟಿ ನೌಕರರಿಗೆ ಹಿಂಭಡ್ತಿ ಸಿಗುವ ಸಾಧ್ಯತೆ ಇದೆ. ಹೀಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಆಗ್ರಹಿಸಿ ಬುಧವಾರ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಲಾಗಿದೆ ಎಂದರು.
ಮೀಸಲಾತಿಯ ಕುರಿತು ಜನರಲ್ಲಿ ತಪ್ಪು ತಿಳುವಳಿಕೆ ಇದೆ. ರಾಜಕೀಯ ಮತ್ತು ಔದ್ಯೋಗಿಕ ಮೀಸಲಾತಿಯನ್ನು ಹೆಚ್ಚಿನವರು ಒಂದೇ ಎಂದು ತಿಳಿದುಕೊಂಡು ಮಾತನಾಡುತ್ತಿದ್ದಾರೆ. ಹೀಗಾಗಿ ಸರಕಾರವು ಶೀಘ್ರದಲ್ಲಿ ಸಾಕ್ಷ್ಯಾಧಾರಾಗಳೊಂದಿಗೆ ನ್ಯಾಯಾಲಯಕ್ಕೆ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು. ಬಡ್ತಿ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸುವ ಉದ್ದೇಶದ ಸಂವಿಧಾನದ 117ನೆ ತಿದ್ದಪಡಿ ವಿದೇಯಕವನ್ನು ಆಂಗೀಕರಿಸಬೇಕು. ಜತೆಗೆ ಮೀಸಲಾತಿ ವಿಧೇಯಕವನ್ನು ಸಂವಿಧಾನದ 9ನೆ ಪರಿಚ್ಛೇದದಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಗೋಪಾಲ್ ಮುತ್ತೂರು, ವಿನೋದ್‌ಕುಮಾರ್, ಶಶಿಕಲಾ ಉಪಸ್ಥಿತರಿದ್ದರು.







