ಮಂಗಳೂರು: ಕರಾವಳಿ ಸೌಹಾರ್ದ ರ‍್ಯಾಲಿಗೆ ಸಿಪಿಐ ಬೆಂಬಲ
ಮಂಗಳೂರು, ಫೆ.22: ಕರಾವಳಿಯ ಕೋಮು ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಸಿಪಿಎಂ ಪಕ್ಷದ ದ.ಕ. ಜಿಲ್ಲಾ ಸಮಿತಿ ಫೆ.25ರಂದು ಹಮ್ಮಿಕೊಂಡ ರ‍್ಯಾಲಿಗೆ ಸಿಪಿಐ ಬೆಂಬಲ ಸೂಚಿಸಿದೆ.
ಕೇರಳದಲ್ಲಿ ಸಂಘಪರಿವಾರಕ್ಕೆ ಸೇರಿದ ಹಿಂದುಗಳ ಕೊಲೆಯಾಗುತ್ತಿದೆ ಎಂದು ಆರೋಪಿಸಿ ಈ ಕಾರ್ಯಕ್ರಮವನ್ನು ಜಿಲ್ಲೆಯ ಸಂಘ ಪರಿವಾರದ ಕೆಲವು ಸಂಘಟನೆಗಳು ವಿರೋಧಿಸುತ್ತಿರುವುದು ವಿಷಾದನೀಯ. ಆದರೆ ಈ ಸಂಘಟನೆಗಳು ಹೇಳುವಂತೆ ಕೇವಲ ಹಿಂದು ಸಂಘಟನೆಯ ಸದಸ್ಯರ ಕೊಲೆ ಅಲ್ಲಿ ಆಗುತ್ತಿಲ್ಲ. ಕಮ್ಯುನಿಸ್ಟ್ ಪಕ್ಷಗಳಿಗೆ ಸೇರಿದ ಅನೇಕರ ಕೊಲೆ ಅಲ್ಲಿ ನಡೆದಿದೆ. ಅವರಲ್ಲಿ ಹೆಚ್ಚಿನವರು ಹಿಂದುಗಳಾಗಿರುತ್ತಾರೆ. ಸೌಹಾರ್ದ ರ‍್ಯಾಲಿಯಲ್ಲಿ ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಭಾಗವಹಿಸಿ ತನ್ನ ಅಭಿಪ್ರಾಯ ಮಂಡಿಸಲಿದ್ದಾರೆ.
ಕರಾವಳಿ ಜಿಲ್ಲೆಗಳ ಕುಲಷಿತ ವಾತಾವರಣವನ್ನು ತಿಳಿಗೊಳಿಸುವ ಸಲುವಾಗಿ ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುವ ಅವಶ್ಯಕತೆ ಇದೆ. ಸಂಘಪರಿವಾರದ ಸಂಘಟನೆಗಳ ಈ ವಿರೋಧ, ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕಾಪಾಡುವ ಬದಲಾಗಿ ಕೆರಳಿಸುವ ಪ್ರಯತ್ನವಾಗಿದೆ ಎಂದು ಸಿಪಿಐ ಅಭಿಪ್ರಾಯ ಪಟ್ಟಿದೆ. ಈ ಸೌಹಾರ್ದ ರ‍್ಯಾಲಿಯಲ್ಲಿ ಸಿಪಿಐ ಭಾಗವಹಿಸಲಿದ್ದು, ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಪೂರ್ಣ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದೆ.





