ಮಂಗಳೂರು: ಮನಪಾ ಮುಂದೆ ತ್ಯಾಜ್ಯ ವಿಲೇವಾರಿ ಕಾರ್ಮಿಕರ ಧರಣಿ

ಮಂಗಳೂರು, ಫೆ.22: ಮನಪಾ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಯ ಗುತ್ತಿಗೆ ವಹಿಸಿರುವ ಆ್ಯಂಟನಿ ವೇಸ್ಟ್ ಕಂಪನಿಗೆ ಸೇರಿದ ಕಾರ್ಮಿಕರು ಸಕಾಲದಲ್ಲಿ ಸಂಬಳ ಪಾವತಿಯಾಗದಿರುವುದನ್ನು ವಿರೋಧಿಸಿ ಬುಧವಾರ ಬಿಎಂಎಸ್ ಆಶ್ರಯದಲ್ಲಿ ಪಾಲಿಕೆ ಕಚೇರಿ ಎದುರು ಧರಣಿ ನಡೆಸಿದರು.
ಈ ಮಧ್ಯೆ ತ್ಯಾಜ್ಯ ವಿಲೇವಾರಿಯಾಗದೆ ನಗರದೆಲ್ಲೆಡೆ ಮನೆ ಹಾಗೂ ಬೀದಿಗಳಲ್ಲಿ ಕಸ ರಾಶಿ ಬಿದ್ದಿದ್ದು ಮಧ್ಯಾಹ್ನದ ಬಳಿಕ ವಿಲೇವಾರಿ ಆರಂಭಗೊಂಡಿದೆ.
ತ್ಯಾಜ್ಯ ವಿಲೇವಾರಿಯ ಗುತ್ತಿಗೆ ವಹಿಸಿರುವ ಆ್ಯಂಟನಿ ವೇಸ್ಟ್ ಕಂಪೆನಿಯಲ್ಲಿ 785 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ 630 ಮಂದಿ ತ್ಯಾಜ್ಯ ವಿವೇವಾರಿ ಕಾರ್ಮಿಕರು ಮತ್ತು 130 ಮಂದಿ ಚಾಲಕರು ಹಾಗೂ 25 ಮಂದಿ ಸೂಪರ್‌ವೈಸರ್ ಸೇರಿದ್ದಾರೆ. ಇವರಿಗೆ ಜನವರಿ ತಿಂಗಳ ಸಂಬಳವಾಗಿಲ್ಲ ಎನ್ನಲಾಗಿದೆ. ಇನ್ನು ಕೆಲವರಿಗೆ ಮೂರು ತಿಂಗಳಿನಿಂದ ಸಂಬಳವಾಗಿಲ್ಲ ಎಂದು ಧರಣಿಯ ನೇತೃತ್ವ ವಹಿಸಿದ್ದ ಬಿಎಂಎಸ್ ಮುಖ್ಯಸ್ಥ ವಿಶ್ವನಾಥ ಶೆಟ್ಟಿ ತಿಳಿಸಿದ್ದಾರೆ.
ಆ್ಯಂಟನಿ ವೇಸ್ಟ್ ಕಂಪನಿಗೆ ಸಂಬಂಧಿಸಿದಂತೆ ಕೆಲವು ವ್ಯಾಜ್ಯಗಳು ಜಿಲ್ಲಾ ಕಾರ್ಮಿಕ ಇಲಾಖೆಯಲ್ಲಿರುವುದರಿಂದ ಬಿಎಂಎಸ್ ನೇತೃತ್ವದಲ್ಲಿ 600ಕ್ಕೂ ಅಧಿಕ ಕಾರ್ಮಿಕರು ಬುಧವಾರ ಬೆಳಗ್ಗೆ ಜಿಲ್ಲಾ ಕಾರ್ಮಿಕ ಇಲಾಖೆಗೆ ತೆರಳಿದ್ದರು. ಆದರೆ ಹಿರಿಯ ಕಾರ್ಮಿಕ ಅಧಿಕಾರಿಗಳು ತರಬೇತಿಗಾಗಿ ಬೆಂಗಳೂರಿಗೆ ತೆರಳಿದ್ದರಿಂದ ಕಾರ್ಮಿಕರು ಪಾಲಿಕೆ ಕಚೇರಿಗೆ ಮುಂದೆ ಧರಣಿ ನಡೆಸಿದರು.
ಬಿಎಂಎಸ್ ಮುಖ್ಯಸ್ಥ ವಿಶ್ವನಾಥ ಶೆಟ್ಟಿಯ ನೇತೃತ್ವದ ನಿಯೋಗ ಮೇಯರ್ ಹರಿನಾಥ್ ಹಾಗೂ ಆಯುಕ್ತ ಮುಹಮ್ಮದ್ ನಝೀರ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಧರಣಿಯನ್ನು ಹಿಂತೆಗೆದುಕೊಳ್ಳಲಾಯಿತು.
ಪಾಲಿಕೆಯು ಆ್ಯಂಟನಿ ವೇಸ್ಟ್ ಕಂಪೆನಿಗೆ ಮೂರು ತಿಂಗಳ ಹಣ ಬಾಕಿ ಇರಿಸಿದ್ದು, ಅದರಲ್ಲಿ ಒಂದು ತಿಂಗಳ ಹಣವನ್ನು ಚೆಕ್ ಮೂಲಕ ಬುಧವಾರ ಪಾವತಿಸಿದೆ. ಪಾಲಿಕೆಯ ಷರತ್ತಿನ ಪ್ರಕಾರ ಗುತ್ತಿಗೆದಾರ ಕಂಪೆನಿಯು 3 ತಿಂಗಳವರೆಗೆ ಪಾಲಿಕೆ ಪಾವತಿಸದಿದ್ದರೂ ತಾವೇ ಸಿಬ್ಬಂದಿಯ ಸಂಬಳದ ವ್ಯವಸ್ಥೆಯನ್ನು ಮಾಡಬೇಕು.ಆದರೆ ಆ್ಯಂಟನಿ ವೇಸ್ಟ್‌ನವರು ಷರತ್ತನ್ನು ಉಲ್ಲಂಸುತ್ತಿದ್ದಾರೆ. ಆ್ಯಂಟನಿ ವೇಸ್ಟ್ ಕಂಪೆನಿಗೆ ಡಿರೆನ್ಸ್ ಅವೌಂಟ್ ಬಾಕಿ ಇದ್ದು, ಈ ವಿವಾದವನ್ನು ಜಿಲ್ಲಾಧಿಕಾರಿ ಬಗೆಹರಿಸಬೇಕು ಎಂದು ಮೇಯರ್ ಹರಿನಾಥ್ ಹೇಳಿದರು.







