ಉಡುಪಿ: ಮುಖ್ಯಶಿಕ್ಷಕಿ ವರ್ಗಾವಣೆಗೆ ಆಗ್ರಹಿಸಿ ಧರಣಿ

ಉಡುಪಿ, ಫೆ.22: ಕಲ್ಯಾಣಪುರ ವೌಂಟ್ ರೋಜರಿ ಹೈಸ್ಕೂಲಿನ ದಲಿತ ದೈಹಿಕ ಶಿಕ್ಷಕ ಹಾಗೂ ವಿದ್ಯಾರ್ಥಿಗಳಿಗೆ ಮಾನಸಿಕ ಕಿರುಕುಳ ನೀಡಿ ರುವ ಮುಖ್ಯ ಶಿಕ್ಷಕಿ ಸಿಸ್ಟರ್ ರೆಜಿನಾ ಅವರನ್ನು ವರ್ಗಾವಣೆಗೊಳಿಸುವಂತೆ ಆಗ್ರಹಿಸಿ ದಸಂಸ ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಶಾಖೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಬುಧವಾರ ಶಾಲೆಯ ಎದುರು ಧರಣಿ ನಡೆಸಿದವು.
ದಸಂಸ ಜಿಲ್ಲಾ ಸಂಚಾಲಕ ರಮೇಶ್ ಕೋಟ್ಯಾನ್ ಮಾತನಾಡಿ, ಆರು ತಿಂಗಳ ಹಿಂದೆ ಶಾಲೆಗೆ ವರ್ಗಾವಣೆಗೊಂಡು ಬಂದಿರುವ ಮುಖ್ಯ ಶಿಕ್ಷಕಿ ಸಿಸ್ಟರ್ ರೆಜಿನಾ ದೈಹಿಕ ಶಿಕ್ಷಕ ನಾಗರಾಜ್‌ಗೆ ನಿರಂತರ ಕಿರುಕುಳ, ಮಾನಸಿಕ ಹಿಂಸೆ ನೀಡಿ ದೌರ್ಜನ್ಯ ನಡೆಸಿದ್ದಾರೆ. ದಲಿತ ವಿರೋಧಿ ನೀತಿ ಅನುಸರಿಸು ತ್ತಿರುವ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಮುಂದೆ ಉಸ್ತುವಾರಿ ಸಚಿವರ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಮತಾ ಸೈನಿಕ ದಳದ ವಿಶ್ವನಾಥ್ ಪೇತ್ರಿ, ಕರವೇ ಮುಖಂಡ ರಮೇಶ್ ಶೆಟ್ಟಿ, ಸುಧಾಕರ್ ಕುಕ್ಕುಡೆ, ರಿಕ್ಷಾ ಚಾಲಕ ಮಾಲಕ ಸಂಘದ ಗಣೇಶ್, ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು.





