ಮಾನಸಿಕ ಅಸ್ವಸ್ಥರ ಪುನರ್ವಸತಿಗೆ ಮಾರ್ಗಸೂಚಿ ಅಗತ್ಯ:ಸುಪ್ರೀಂ ಕೋರ್ಟ್

ಹೊಸದಿಲ್ಲಿ,ಫೆ.22: ತಮ್ಮ ಮಾನಸಿಕ ಅಸ್ವಸ್ಥತೆಯಿಂದ ಗುಣಮುಖರಾಗಿರುವ ವ್ಯಕ್ತಿಗಳ ಪುನರ್ವಸತಿಗಾಗಿ ಮಾರ್ಗಸೂಚಿಗಳನ್ನು ರೂಪಿಸುವಂತೆ ಬುಧವಾರ ಕೇಂದ್ರಕ್ಕೆ ಸೂಚಿಸಿದ ಸರ್ವೋಚ್ಚ ನ್ಯಾಯಾಲಯವು, ಇದೊಂದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಇದೊಂದು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು ಕೇಂದ್ರವು ವಿವೇಚನೆಯನ್ನು ಪ್ರದರ್ಶಿಸಬೇಕು.ಮಾನಸಿಕ ಅಸ್ವಸ್ಥರು ಗುಣಮುಖರಾದ ಬಳಿಕ ಅವರ ಕುಟುಂಬದವರೂ ಸಹ ಅವರನ್ನು ಸೇರಿಸಿಕೊಳ್ಳಲು ಬಯಸುವುದಿಲ್ಲ. ಕೇಂದ್ರವು ಈ ಬಗ್ಗೆ ಯೋಚಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಎಸ್.ಕೆ.ಕೌಲ್ ಅವರನ್ನೊಳಗೊಂಡ ಪೀಠವು ಹೇಳಿತು.
ವ್ಯಕ್ತಿ ಮಾನಸಿಕ ಅಸ್ವಸ್ಥತೆಯಿಂದ ಸಂಪೂರ್ಣವಾಗಿ ಗುಣಮುಖಗೊಂಡ ಬಳಿಕ ಆತ/ಆಕೆ ಆಸ್ಪತ್ರೆಯಲ್ಲಿಯೇ ಇರಲು ಸರಕಾರವು ಅವಕಾಶ ನೀಡುವಂತಿಲ್ಲ. ಅವರನ್ನು ನಾಗರಿಕ ಸಮಾಜಕ್ಕೆ ಮರಳಿ ಕರೆ ತರಬೇಕಾಗಿದೆ. ಇದಕ್ಕಾಗಿ ನೀತಿಯೊಂದನ್ನು ಕೇಂದ್ರವು ರೂಪಿಸಬೇಕು. ಇದನ್ನು ಸುಲಭವಾಗಿ ಸಾಧಿಸಬಹುದು.
ನೀವು ನಮಗೆ ಮಾದರಿ ಯೋಜನೆಯೊಂದನ್ನು ಸಲ್ಲಿಸಿ ಮತ್ತು ನಾವು ಅದನ್ನು ರಾಜ್ಯ ಸರಕಾರಗಳಿಗೆ ಕಳುಹಿಸಿ ಅವುಗಳ ಅಭಿಪ್ರಾಯ ಕೇಳುತ್ತೇವೆ ಎಂದು ಪೀಠವು ಕೇಂದ್ರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರಿಗೆ ತಿಳಿಸಿತು.
ಸಾಲಿಸಿಟರ್ ಜನರಲ್ ಮನವಿಯ ಮೇರೆಗೆ ಪೀಠವು ಇದಕ್ಕಾಗಿ ಎಂಟು ವಾರಗಳ ಕಾಲಾವಕಾಶವನ್ನು ನೀಡಿತು.







