ಪುತ್ತೂರು: ದಂಪತಿ ಕೊಲೆ ಪ್ರಕರಣ; ಆರೋಪ ಸಾಬೀತು
.jpg)
ಪುತ್ತೂರು, ಫೆ.22: ಕಳೆದ ನಾಲ್ಕೂವರೆ ವರ್ಷಗಳ ಹಿಂದೆ ನಡೆದ ದಂಪತಿ ಕೊಲೆ, ನಗದು ಮತ್ತು ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನ್ಯಾಯಾಲಯ ಇಬ್ಬರು ಆರೋಪಿಗಳನ್ನು ಬುಧವಾರ ಅಪರಾಧಿ ಎಂದು ತೀರ್ಪು ನೀಡಿದ್ದು, ಫೆ.25ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.
ಸೋಮವಾರ ಪೇಟೆ ತಾಲೂಕಿನ ಮಹಮ್ಮದ್ ರಫೀಕ್ ಅಲಿಯಾಸ್ ರಫೀಕ್ ಮತ್ತು ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ನುರಿಯಾಳು ನಿವಾಸಿ ಮಹಮ್ಮದ್ ಕಮಲುದ್ದೀನ್ ಯಾನೆ ಸೈದ್ ಕೊಲೆ ಪ್ರಕರಣದ ಅಪರಾಧಿಗಳು.
ಪುತ್ತೂರು ತಾಲೂಕಿನ ಕೋಡಿಂಬಾಳ ಗ್ರಾಮದ ಉಂಡಿಲ ನಿವಾಸಿ ಬೇಬಿ ಥಾಮಸ್(58) ಮತ್ತು ಅವರ ಪತ್ನಿ ಮೇರಿ ಥಾಮಸ್(45) ಕೊಲೆಯಾದ ದಂಪತಿಗಳು.
2012ರ ಸೆ.25 ರಂದು ರಾತ್ರಿ ಆರೋಪಿಗಳಿಬ್ಬರು ಬೇಬಿ ಥಾಮಸ್ ಅವರ ಮನೆಗೆ ಆಗಮಿಸಿದ ತಮ್ಮ ಬೈಕ್ ಹಾಳಾಗಿದ್ದು, ಅಲ್ಲಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿರುವ ಆರೋಪಿಯೊಬ್ಬನ ಪತ್ನಿಯ ಮನೆಗೆ ಹೋಗಬೇಕು ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ ಈ ಸ್ಥಳದ ಪರಿಚಯವಿದ್ದ ಥಾಮಸ್ ಅವರು ತನ್ನ ಇಂಡಿಕಾ ಕಾರಿನಲ್ಲಿ ಆರೋಪಿಗಳಿಬ್ಬರನ್ನೂ ಕೂರಿಸಿಕೊಂಡು ಅಲ್ಲಿಗೆ ತೆರಳಿದ್ದರು.
ದಾರಿ ನಡುವೆ ಬೊಳ್ಳೂರು ಕ್ರಾಸ್ ಸಮೀಪಕ್ಕೆ ಕಾರು ತಲುಪಿದಾಗ ಕಾರನ್ನು ನಿಲ್ಲಿಸುವಂತೆ ಆರೋಪಿಗಳು ಸೂಚಿಸಿದ್ದು, ಬೇಬಿ ಥಾಮಸ್ ಅವರಿಗೆ ಚೂರಿಯಿಂದ ಇಬ್ಬರೂ ಇರಿದು ಕೊಲೆ ನಡೆಸಿದ್ದರು. ಬಳಿಕ ಕಾರಿನಲ್ಲಿ ಮೃತದೇಹವನ್ನಿರಿಸಿ ಅದೇ ಕಾರಿನಲ್ಲಿ ಹಿಂದಿರುಗಿ ಥಾಮಸ್ ಅವರ ಮನೆಗೆ ಬಂದ ಆರೋಪಿಗಳು ಮನೆಯ ಒಳಹೊಕ್ಕು ಮೇರಿ ಥಾಮಸ್ ಅವರನ್ನೂ ಇರಿದು ಕೊಲೆ ನಡೆಸಿ ಇಬ್ಬರ ಮೈಮೇಲಿದ್ದ ಒಡವೆಗಳು ಹಾಗೂ ಮನೆಯ ಕಪಾಟಿನಲ್ಲಿದ್ದ ನಗ ಮತ್ತು ನಗದು ಹಾಗೂ ಮೊಬೈಲ್ ಎಗರಿಸಿ ಪರಾರಿಯಾಗಿದ್ದರು.
ಪ್ರಕರಣವನ್ನು ಕೈಗೆತ್ತಿಕೊಂಡ ಕಡಬ ಠಾಣಾ ಪೊಲೀಸರು ಕೊಲೆಯಾಗಿ ಒಂದು ತಿಂಗಳ ಬಳಿಕ ಆರೋಪಿಗಳು ಮನೆಯಿಂದ ಕಳವು ನಡೆಸಿದ ಮೊಬೈಲ್ ಸಂಖ್ಯೆಯನ್ನು ಆಧರಿಸಿ ಆರೋಪಿಗಳಿಬ್ಬರನ್ನೂ ಮಡಿಕೇರಿ ಸಮೀಪ ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಂ. ರಾಮಚಂದ್ರ ಅವರ ನ್ಯಾಯಪೀಠ ಆರೋಪಿಗಳಿಬ್ಬರೂ ಅಪರಾಧಿಗಳು ಎಂದು ತೀರ್ಪು ನೀಡಿದೆ. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕ ಎಂ. ಉದಯಕುಮಾರ್ ವಾದಿಸಿದ್ದರು.







