ಬೆಳ್ತಂಗಡಿ: ಅಕ್ರಮ ಬಾಂಗ್ಲಾ ನಿವಾಸಿಗರ ಬಂಧನ

ಬೆಳ್ತಂಗಡಿ, ಫೆ.22: ಬೆಳ್ತಂಗಡಿ ಕೂಲಿ ಕಾರ್ಮಿಕರಾಗಿ ವೇಣೂರು ಸಮೀಪದ ಕಾಶೀಪಟ್ಣ ಎಂಬಲ್ಲಿ ದುಡಿಯುತ್ತಿದ್ದ ಹದಿನಾಲ್ಕು ಮಂದಿಯನ್ನು ವೇಣೂರು ಪೋಲೀಸರು ಅಕ್ರಮ ಬಾಂಗ್ಲಾ ವಲಸಿಗರೆಂದು ಬಂಧಿಸಿದ್ದು, ಆಶ್ರಯ ನೀಡಿದವರ ವಿರುದ್ದವೂ ಪ್ರಕರಣ ದಾಖಲಿಸಲಾಗಿದೆ. ಬುಧವಾರ ಸಂಜೆ ಮಡಿಕೇರಿ ಪೋಲೀಸರ ಸಹಾಯದೊಂದಿಗೆ ನಡೆಸಿದ ಧಾಳಿಯಲ್ಲಿ ಈ ಎಲ್ಲ ವಿದೇಶೀಯರನ್ನೂ ಬಂಧಿಸಲಾಗಿದೆ.
ಮಡಿಕೇರಿಯ ವೀರಾಜ್‌ಪೇಟೆಯಲ್ಲಿ ಬಾಂಗ್ಲಾ ದೇಶದ ಸೊಹೆಲ್ ಎಂಬಾತನನ್ನು ಯುವತಿಯೊಂದಿಗಿನ ಪ್ರಕರಣದಲ್ಲಿ ಅಲ್ಲಿನ ಪೋಲಿಸರು ಬಂಧಿಸಿದ್ದರು. ಈತನ ವಿಚಾರಣೆಯ ಸಂದರ್ಭ ಆತನ ಸಹೋದರ ಮಹಮ್ಮದ್ ಜಹಾಂಗೀರ್ ಎಂಬಾತ ಬೆಳ್ತಂಗಡಿ ತಾಲೂಕಿನ ಕಾಶಿಪಟ್ಟಣದಲ್ಲಿರುವುದು ತಿಳಿದು ಬಂತು. ಹೀಗಾಗಿ ಮಡಿಕೇರಿ ಪೋಲಿಸರ ತಂಡ ಸೊಹೆಲ್ ನೊಂದಿಗೆ ಜಂಗೀರ್ ನನ್ನು ಹುಡುಕುತ್ತಾ ವೇಣೂರಿಗೆ ಬಂದು ಇಲ್ಲಿನ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.ಬಳಿಕ ವೇಣೂರು ಪೋಲಿಸರು ಹಾಗೂ ಮಡಿಕೇರಿ ಪೋಲೀಸರು ಒಟ್ಟಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 14 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಪೋಲೀಸ್ ವಶದಲ್ಲಿರುವ ವ್ಯಕ್ತಿಗಳು ಬಾಂಗ್ಲಾದೇಶದ ಢಾಕಾ ರಾಜ್ಯದ ರಾಜಸೈ ನಿವಾಸಿಗಳಾಗಿರುವ ಮುಹಮ್ಮದ್ ಜಹಾಂಗೀರ್(26) ,ಹಕ್ಕೀಂ(27), ಆಲಂಗೀರ್(27), ಹಾಲೀಂ(19), ಮುಹಮ್ಮದ್ ಹಝೀಜುಲ್ಲಾ(19), ಎಂ.ಡಿ ಬಾಬು(20), ಜೊಹರುಲ್ಲಾಇಸ್ಲಾಂ(24),ಸೊಹಿದುಲ್ಲಾ ಇಸ್ಲಾಂ(30),ಇಕ್ಬಾಲ್ ಹಾಲಿ(19), ಸೊಹೆಲ್ ರಾಣಾ(19),ಜೊಹರುಲ್ಲಾ ಇಸ್ಲಾಂ(35), ಸುಮನ್ ಹಾಲಿ(24), ಮಹಮ್ಮದ್ ಮೊಮೊನ್(20),ಮಹಮ್ಮದ್ಕುಲ್ಲಾಲ್(19), ಇವರೆಲ್ಲರೂ ಕಾಶೀಪಟ್ನ ಸಮೀಪ ಕೂಲಿ ಕಾರ್ಮಿಕರಾಗಿ ನಿರ್ಮಾಣಹಂತದ ಕಟ್ಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು, ಬಾಂಗ್ಲಾದೇಶೀ ನಾಗರಿಕರಾಗಿರುವ ಇವರು ಕೆಲಸ ಅರಸುತ್ತಾ ಭಾರತಕ್ಕೆ ಬಂದಿದ್ದರು ಎನ್ನಲಾಗಿದೆ.
ಇವರಿಗೆ ಆಶ್ರಯ ನೀಡಿದ ಆರೋಪದ ಮೇಲೆ ಮೂಡಬಿದ್ರೆ ನಿವಾಸಿ ನಿಸ್ಸಾರ್ ಅಹಮ್ಮದ್ ಎಂಬವರ ವಿರುದ್ದವೂ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ನೇತ್ರತ್ವದಲ್ಲಿ ವಲಸಿಗರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.







