ಮುಲ್ಕಿ: ಬಾವಿ ತೋಡಲು ಆಗ್ರಹಿಸಿ ಮನವಿ

ಮುಲ್ಕಿ, ಫೆ.22: ಇಲ್ಲಿನ ಸಮೀಪದ ಗೇರುಕಟ್ಟೆಯ ಪ.ಜಾತಿ ಕಾಲನಿಯಲ್ಲಿ ಬೋರ್ ವೆಲ್ ನಲ್ಲಿ ಕೆಸರು ನೀರು ಬರುತ್ತಿದ್ದು, ಈ ನಿಟ್ಟಿನಲ್ಲಿ ಬಾವಿಯನ್ನು ತೋಡಬೇಕು ಎಂದು ಪ.ಜಾತಿ ಕಾಲನಿಯ ನಾಗರಿಕರು ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನಿಲ್ ಅಳ್ವ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಕಳೆದ ಹಲವು ವರ್ಷಗಳಿಂದ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಇದರಿಂದ ಸ್ಥಳೀಯರಿಗೆ ತುಂಬಾ ಸಮಸ್ಯೆಗಳಾಗುತ್ತಿವೆ. ಈ ಪ್ರದೇಶದಲ್ಲಿ ಶೀಘ್ರವಾಗಿ 2 ತೆರೆದ ಬಾವಿಗಳನ್ನು ನಿರ್ಮಿಸಿ ಕೊಡಬೇಕು ಎಂದು ನಾಗರಿಕರು ಅಧ್ಯಕ್ಷರನ್ನು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನಿಲ್ ಆಳ್ವ, ಪರಿಶಿಷ್ಟ ಜಾತಿ ಹಾಗೂ ವರ್ಗದವರಿಗೆ ವಿಶೇಷ ಅನುದಾನವಿದೆ. ಆ ಯೋಜನೆಯ ಅನುದಾನ ಬಳಸಿಕೊಂಡು ಬಾವಿ ನಿರ್ಮಿಸಿಲು ಪ್ರಯತ್ನಿಸಲಾಗುದು ಎಂದರು.
ಮನವಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೇರುಕಟ್ಟೆಯ ಪ.ಜಾತಿ ಕಾಲನಿ ನಿವಾಸಿಗಳು, ಕಳೆದ 15 ವರ್ಷಗಳಿಂದ ನೀರಿನ ಸಮಸ್ಯೆಯ ಬಗ್ಗೆ ಮುಲ್ಕಿ ನಗರ ಪಂಚಾಯತ್‌ಗೆ ಮನವಿ ಮಾಡಲಾಗುತ್ತಿದೆ. ಆದರೆ, ನಗರ ಪಂಚಾಯತ್ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಕಾಲನಿಯಲ್ಲಿ ಒಂದು ಬೋರ್‌ವೆಲ್ ಇದ್ದು ಅದರಲ್ಲಿ ಬರುವ ನೀರು ಮಾನವ ಸಹಿತ ಪ್ರಾಣಿಗಳ ಉಪಯೋಗಕ್ಕೂ ಯೋಗ್ಯವಾಗಿಲ್ಲ. ಈ ಬಗ್ಗೆ ನಗರ ಪಂಚಾಯತ್‌ಗೆ ಹಲವು ಬಾರಿ ದೂರು ನೀಡಿದ ಬಳಿಕ ಬೋರ್‌ವೆಲ್‌ನ ನೀರು ಪರೀಕ್ಷೆ ನಡೆಸಲಾಗಿತ್ತು. ಆದರೆ, ಈವರೆಗೆ ಅದರ ಫಲಿತಾಂಶ ಈವರೆಗೂ ಬಂದಿಲ್ಲ ಎಂದು ಆರೋಪಿಸಿದ್ದಾರೆ.
ಬೋರ್‌ವೆಲ್ ನೀರಿಗೆ ಮೀಟರ್ ಅಳವಡಿಸಲಾಗಿದೆ. ನೀರು ಪಡೆಯದಿದ್ದರೂ ಪ್ರತೀ ತಿಂಗಳು ಬಿಲ್ ಪಾವತಿಸಬೇಕಾದ ಪರಿಸ್ಥಿತಿ ಇದೆ. ಇತ್ತೀಚಿನ ಕೆಲ ದಿನಗಳಿಂದ ನೀರಿನ ವ್ಯವಸ್ಥೆ ಸರಿಯಾಗದೆ ಬಿಲ್ ಕಟ್ಟುವುದಿಲ್ಲ ಎಂದು ನಗರ ಪಂಚಾಯತ್‌ಗೆ ಎಚ್ಚರಿಕೆ ನೀಡಿದ್ದು, ಬಿಲ್ ಪಾವತಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪ್ರತೀ ಬಾರಿ ದೂರು ನೀಡಿದಾಗ ಬೋರ್‌ವೆಲ್‌ನ ನೀರು ಉಪಯೋಗಿಸುವಂತೆ ನಗರ ಪಂಚಾಯತ್‌ನ ಅಧಿಕಾರಿಗಳು ಬಿಟ್ಟಿ ಸಲಹೆ ನೀಡುತ್ತಾರೆ ವಿನ: ಸೂಕ್ತ ಪರಿಹಾರ ಕಲ್ಪಿಸುತ್ತಿಲ್ಲ ಎಂದು ದೂರಿರುವ ನಾಗರಿಕರು, ಗೇರುಕಟ್ಟೆ ಪ.ಜಾತಿ ಕಾಲನಿಯಲ್ಲಿ ಬಾವಿ ನಿರ್ಮಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಇಲ್ಲವಾದಲ್ಲಿ ನಗರ ಪಂಚಾಯತ್‌ನ ಮುಂಭಾಗದಲ್ಲಿ ನಮ್ಮ ಬೇಡಿಕೆ ಈಡೇರುವ ವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭ ಕೆ. ಸಚ್ಚಿದಾನಂದ, ಬಿ. ಶೇಖರ್, ರಾಜೀವಿ, ಗೋಪಿ, ಲಲಿತಾ, ರೇಶ್ಮ, ಕುಸುಮ, ಲಕ್ಷೀ, ಸವಿತಾ, ಸೀತಾ, ಶಾಂತ, ಕಮಲ, ಶಾಂತಿ, ಪುಷ್ಪ ಮತ್ತಿತರರು ಇದ್ದರು.







