ಕೊಯಿಲ: ವಿದ್ಯಾರ್ಥಿನಿಯರ ವಿರುದ್ಧ ಆಕ್ಷೇಪ, ಹೊಡೆದಾಟ; ಪ್ರತ್ಯೇಕ 2 ಪ್ರಕರಣ, 24 ಮಂದಿ ವಿರುದ್ಧ ದೂರು ದಾಖಲು

ಉಪ್ಪಿನಂಗಡಿ, ಫೆ.22: ಮುಸ್ಲಿಂ ವಿದ್ಯಾರ್ಥಿನಿಯೋರ್ವಳ ಜೊತೆ ಆಕೆಯ 3 ಮಂದಿ ಹಿಂದೂ ಸ್ನೇಹಿತೆಯರು ಮನೆಗೆ ಬಂದಿದ್ದನ್ನು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಹಿಂದೂ ಮುಸ್ಲಿಂ ಯುವಕರೊಡನೆ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ 2 ಪ್ರಕರಣದಲ್ಲಿ 24 ಮಂದಿ ವಿರುದ್ಧ ದೂರು ದಾಖಲಾಗಿದೆ.
ಮನೆಯಲ್ಲಿ ಹಿಂದು ಹುಡುಗಿಯರು ಇದ್ದಾರೆ ಎಂದು ಹೇಳಿಕೊಂಡು ಮನೆಯೊಳಗೆ ನುಗ್ಗಿದ ಆರೋಪಿಗಳಾದ ಪ್ರಶಾಂತ್, ಶರತ್ ಭಂಡಾರಿ, ದಿವಾಕರ, ರಕ್ಷಿತ್ ಕೊಯಿಲ, ಸುದರ್ಶನ್ ಇವರನ್ನು ಒಳಗೊಂಡಂತೆ 18 ಮಂದಿ ತಂಡ ಮನೆಯಲ್ಲಿದ್ದ ತನ್ನ ಮಗಳು ಮತ್ತು ಆಕೆಯ 3 ಮಂದಿ ಸ್ನೇಹಿತೆಯರ ಮೇಲೆ ದೌರ್ಜನ್ಯ ಎಸಗಿ, ಜೀವ ಬೆದರಿಕೆ ಒಡ್ಡಿದ್ದಾರೆಎಂದು ಕೊಯಿಲ ಮಹಮ್ಮದ್ ಮುಸ್ಲಿಯಾರ್ ಎಂಬವರ ಪತ್ನಿ ನೆಬಿಸ ಎಂಬವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ನವೀನ್ ಎಂಬವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆರೋಪಿಗಳಾದ ಅರಫತ್, ತೌಶೀಪ್, ಬಶೀರ್, ಶರೀಫ್, ಸಿರಾಜ್, ಹೈದರ್ ಮತ್ತು ಇತರರು ತನ್ನ ಮೇಲೆ ಎರಗಿ ಹಲ್ಲೆ ನಡೆಸಿದ್ದಾರೆಎಂದು ದೂರು ಸಲ್ಲಿಸಿದ್ದಾರೆ.
ವಿದ್ಯಾರ್ಥಿನಿಯರು ಹಿಂದೆಯೂ ಬಂದಿದ್ದರು:
ಕೊಯಿಲದ ಮಹಮ್ಮದ್ ಮುಸ್ಲಿಯಾರ್ ಪುತ್ರಿ ಮೈಸೂರುನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದು, ಆಕೆಯ ಸಹಪಾಠಿಗಳಾದ ಒಬ್ಬಾಕೆ ಗುಲ್ಬರ್ಗಾದ ಯಾದಗಿರಿ ಮತ್ತೊಬ್ಬಳು ಹೈದರಾಬಾದ್, ಇನ್ನೊಬ್ಬಳು ಮುಂಬೈ ಮೂಲದವರು ಎಂದು ಹೇಳಲಾಗಿದೆ. ಇವರು ಕಾಲೇಜು ರಜಾ ನಿಮಿತ್ತ ಶನಿವಾರ ಕೊಯಿಲಕ್ಕೆ ಬಂದಿದ್ದು, ಬುಧವಾರ ಹೋಗುವವರಿದ್ದರು ಎಂದು ಹೇಳಲಾಗಿದೆ. ಈ ಮಧ್ಯೆ ಈ ಘಟನೆ ಸಂಭವಿಸಿದೆ.
ಈ ವಿದ್ಯಾರ್ಥಿನಿಯರು ಇಲ್ಲಿಗೆ ಕಳೆದ ಬಕ್ರಿದ್ ಹಬ್ಬದ ದಿನದಂದು ಬಂದಿದ್ದರೆನ್ನಲಾಗಿದೆ. ಇವರುಗಳು ತನ್ನ ಮನೆಯವರ ಅನುಮತಿ ಪಡೆದು ಬಂದವರೆನ್ನಲಾಗಿದ್ದು, ಪೊಲೀಸರು ವಿದ್ಯಾರ್ಥಿಗಳ ವಿಚಾರಣೆ ಮತ್ತು ಮನೆಯವರನ್ನು ಸಂಪರ್ಕಿಸಿ ಪಡೆದಿರುವ ಹೇಳಿಕೆಯಲ್ಲಿಯೂ ಇವರು ಇಲ್ಲಿಗೆ ಬರುವುದಕ್ಕೆ ಸಮ್ಮತಿ ಪಡೆದಿರುವ ಬಗ್ಗೆ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೆಚ್ಚುವರಿ ಬಂದೋಬಸ್ತ್:
ಘಟನಾ ಸ್ಥಳಕ್ಕೆ ಮಂಗಳವಾರ ರಾತ್ರಿ ದ.ಕ. ಜಿಲ್ಲಾ ಎಸ್.ಪಿ. ಭೂಶನ್ ಬೊರಸೆ, ಪುತ್ತೂರು ಡಿವೈಎಸ್ಪಿ. ಭಾಸ್ಕರ ರೈ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಸ್ಥಳದಲ್ಲಿ ಮುಂಜಾಗ್ರತಾ ಸಲುವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.







