2014ರ ಚುನಾವಣೆಯಲ್ಲಿ ಅವ್ಯವಹಾರ: ತಹಶೀಲ್ದಾರ್ ಗುರುಪ್ರಸಾದ್ ವಿರುದ್ಧ ತನಿಖೆ
ಉಡುಪಿ, ಫೆ.22: 2014ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆಗಿನ ಉಡುಪಿ ತಹಶೀಲ್ದಾರ್ ಗುರುಪ್ರಸಾದ್ ಅವರು ಚುನಾವಣಾ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ಆರೋಪಿಸಿ ಉಡುಪಿಯ ಆರ್‌ಟಿಐ ಕಾರ್ಯಕರ್ತ ಯೋಗೀಶ್ ಶೇಟ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಕುಂದಾಪುರದ ಉಪವಿಭಾಗಾಧಿಕಾರಿಗಳು ತನಿಖೆಯನ್ನು ನಡೆಸುತಿದ್ದಾರೆ ಎಂದು ತಿಳಿದುಬಂದಿದೆ.
ಯೋಗೀಶ್ ಶೇಟ್ ಅವರು ಈ ಕುರಿತು ಕಳೆದ ವರ್ಷದ ಮೇ ತಿಂಗಳಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ, ಪ್ರದಾನ ಮಹಾಲೇಖಪಾಲ ರಿಗೆ, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ.
ವಿಧಾನಸಭಾ ಚುನಾವಣೆಯ ವೇಳೆ ಉಡುಪಿ ಮತ್ತು ಕಾಪು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿದ್ದ ಗುರುಪ್ರಸಾದ್ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಚುನಾವಣಾ ವೆಚ್ಚಗಳಿಗಾಗಿ ಬಂದ ಒಟ್ಟು 53 ಲಕ್ಷ ರೂ.ಅನುದಾನದಲ್ಲಿ ಅಧಿಕಾಂಶವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.
ಈ ಎರಡು ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯ ನಿರ್ವಹಿಸಿದ ಯಾವುದೇ ಸಿಬ್ಬಂದಿಗೆ ಪರಿಪೂರ್ಣವಾಗಿ ಹಣ ನೀಡಿಲ್ಲ, ಖಜಾನೆಗೆ ಸೇರಿದ ಹಣವನ್ನು ಬ್ಯಾಂಕ್ ಖಾತೆಗೆ ಹಾಕಿ ತನಗೆ ಇಷ್ಟ ಬಂದವರಿಗೆ ನಿಗದಿತ ಮೊತ್ತಕ್ಕಿಂತ ಕಡಿಮೆ ಪಾವತಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ದೂರಿನ ಕುರಿತು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳು ಕುಂದಾಪುರ ಉಪವಿಭಾಗಾಧಿಕಾರಿ ಗಳಿಗೆ ಆದೇಶಿಸಿದ್ದು, ಅದರಂತೆ ತನಿಖೆ ನಡೆಯುತ್ತಿದೆ ಎಂದು ಯೋಗೀಶ್ ಶೇಟ್ ಅವರು ತಿಳಿಸಿದ್ದಾರೆ.
ಗುರುಪ್ರಸಾದ್ ಅವರು ಉಡುಪಿ ತಹಶೀಲ್ದಾರ್ ಆಗಿ ಲೋಕಸಭಾ, ವಿದಾನಸಭಾ, ಜಿಪಂ, ತಾಪಂ, ಗ್ರಾಪಂ ಸೇರಿದಂತೆ ಒಟ್ಟು ಏಳು ಚುನಾವಣೆಗಳಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಇವುಗಳಲ್ಲಿ ಸಹ ಅವರು ಇದೇ ರೀತಿ ಹಣ ದುರುಪಯೋಗ ನಡೆಸಿರುವುದು ಆರ್‌ಟಿಐ ಮೂಲಕ ಪಡೆದಿರುವ ದಾಖಲೆಗಳಿಂದ ತಿಳಿದು ಬರುತ್ತಿದೆ ಎಂದು ಯೋಗೀಶ್ ಶೇಟ್ ತಿಳಿಸಿದ್ದಾರೆ.







