ಕೂಲರ್ ತಯಾರಿಕೆ ಘಟಕದಲ್ಲಿ ಬೆಂಕಿ: ಆರು ಕಾರ್ಮಿಕರ ಸಜೀವ ದಹನ
ಹೈದರಾಬಾದ್,ಫೆ.22: ಇಲ್ಲಿಯ ಅತ್ತಾಪುರ ಪ್ರದೇಶದಲ್ಲಿನ ಸಣ್ಣ ಕೈಗಾರಿಕಾ ಘಟಕವೊಂದರಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಆರು ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ.
ನಸುಕಿನ ಐದು ಗಂಟೆಯ ಸುಮಾರಿಗೆ ಬೆಂಕಿಯನ್ನು ಗಮನಿಸಿದ ಗಸ್ತುನಿರತ ಪೊಲೀಸ್ ತಂಡವು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳವು ಬೆಂಕಿಯನ್ನಾರಿಸಿತ್ತು. ಸ್ಥಳದಲ್ಲಿ ಸುಟ್ಟು ಕರಕಲಾಗಿದ್ದ ಆರು ಶವಗಳು ಪತ್ತೆಯಾಗಿದ್ದು, ಮೃತರು ಛತ್ತೀಸ್‌ಗಡ ಮತ್ತು ಬಿಹಾರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ ಎಂದು ಡಿಸಿಪಿ ಪಿ.ವಿ.ಪದ್ಮಜಾ ಸುದ್ದಿಸಂಸ್ಥೆಗೆ ತಿಳಿಸಿದರು.
ಏರ್ ಕೂಲರ್‌ಗಳು ಮತ್ತು ಬ್ಯಾಟರಿ ಚಾಲಿತ ವಾಹನಗಳನ್ನು ತಯಾರಿಸುತ್ತಿರುವ ಈ ಘಟಕವು ವಸತಿ ಪ್ರದೇಶಗಳಿಂದ ಸುತ್ತುವರಿದಿದೆ. ಸಾಮಾನ್ಯವಾಗಿ ಈ ಘಟಕದಲ್ಲಿ ನಾಲ್ವರು ಕಾರ್ಮಿಕರಿರುತ್ತಿದ್ದರು, ಆದರೆ ಮಂಗಳವಾರವಷ್ಟೇ ಇನ್ನಿಬ್ಬರು ಹೊಸದಾಗಿ ಸೇರಿಕೊಂಡಿದ್ದರು ಎಂದು ಅವರು ತಿಳಿಸಿದರು.
ಘಟಕದ ಮಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಮಾಲಕ ಘಟಕದಲ್ಲಿ ಸುರಕ್ಷತೆಯ ಬಗ್ಗೆ ಕನಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನೂ ತೆಗೆದುಕೊಂಡಿರಲಿಲ್ಲ ಎನ್ನುವುದು ಪ್ರಾಥಮಿಕ ತನಿಖೆಯಿಂದ ವ್ಯಕ್ತವಾಗಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣವನ್ನು ತಿಳಿಯಲು ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಪದ್ಮಜಾ ತಿಳಿಸಿದರು.





