ಎಸ್‌ಬಿಐ ಎಟಿಎಂನಲ್ಲಿ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾದ 2,000 ರೂ. ನೋಟುಗಳು!
ಹೊಸದಿಲ್ಲಿ, ಫೆ.22: ದಕ್ಷಿಣ ದಿಲ್ಲಿಯ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕೇಂದ್ರವೊಂದರಿಂದ ಫೆಬ್ರವರಿ 6ರಂದು ಹಣ ತೆಗೆದಿದ್ದ ರೋಹಿತ್ ಎಂಬ ಕಾಲ್ ಸೆಂಟರ್ ಉದ್ಯೋಗಿಯೊಬ್ಬರಿಗೆ 2,000 ರೂಪಾಯಿ ಮುಖಬೆಲೆಯ ನಾಲ್ಕು ನಕಲಿ ನೋಟುಗಳು ದೊರೆತಿದ್ದು ಈ ಬಗ್ಗೆ ಸಂಗಮ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಕಲಿ ನೋಟುಗಳನ್ನು ಎಟಿಎಂ ಮಶೀನ್‌ನೊಳಗೆ ಹಾಕಲು ಕಾರಣರ್ಯಾರು ಎಂದು ಪತ್ತೆ ಹಚ್ಚಲು ಪ್ರಯತ್ನಗಳು ನಡೆಯುತ್ತಿವೆ.
ಆಸಕ್ತಿಯ ವಿಷಯವೆಂದರೆ ಈ ನೋಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬರೆದಿರಬೇಕಾದ ಜಾಗದಲ್ಲಿ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಬರೆದಿದ್ದರೆ, ಭಾರತೀಯ ರಿಸರ್ವ್ ಬ್ಯಾಂಕ್ ಎಂದು ಬರೆದಿರಬೇಕಾದಲ್ಲಿ ಭಾರತೀಯ ಮನೋರಂಜನ್ ಬ್ಯಾಂಕ್ ಎಂದಿದೆ. ನೋಟಿನ ಸೀರಿಯಲ್ ಸಂಖ್ಯೆ 000000 ಎಂದು ಬರೆಯಲಾಗಿದ್ದರೆ ಅದರಲ್ಲಿ ರೂಪಾಯಿ ಚಿಹ್ನೆ ನಾಪತ್ತೆಯಾಗಿದೆ. ಆರ್‌ಬಿಐ ಸೀಲ್ ಬದಲು ಪಿಕೆ ಲಾಂಛನ ಈ ನೋಟಿನಲ್ಲಿದ್ದರೆ ಆರ್ ಬಿ ಐ ಗವರ್ನರ್ ಅವರ ಸಹಿಯೂ ಕಾಣುತ್ತಿಲ್ಲ. ಅಶೋಕ ಲಾಂಛನದ ಚಿತ್ರದ ಬದಲು ಚೂರನ್ ಲೇಬಲ್ ಇದ್ದರೆ ಗ್ಯಾರಂಟೀಡ್ ಬೈ ಸೆಂಟ್ರಲ್ ಗವರ್ನ್‌ಮೆಂಟ್ ಎಂದು ಬರೆದಿರಬೇಕಾದಲ್ಲಿ ಗ್ಯಾರೆಂಟೀಡ್ ಬೈ ಚಿಲ್ಡ್ರನ್ ಗವರ್ನ್‌ಮೆಂಟ್ ಎಂದಿದೆ. ಈ ಕೃತ್ಯ ಯಾರದ್ದೆಂದು ಪೊಲೀಸರು ಹಾಗೂ ಬ್ಯಾಂಕ್ ಇನ್ನಷ್ಟೇ ಕಂಡು ಹಿಡಿಯಬೇಕಿದೆ.





