ಉ.ಪ್ರದೇಶದಲ್ಲಿ ಯಾರೊಂದಿಗೂ ಮೈತ್ರಿಯಿಲ್ಲ: ಶಾ
ವಾರಣಾಸಿ, ಫೆ.22: ಉತ್ತರ ಪ್ರದೇಶದಲ್ಲಿ ಒಂದು ವೇಳೆ ಅತಂತ್ರ ವಿಧಾನಸಭೆ ರೂಪುಗೊಂಡರೆ ಬಿಎಸ್ಪಿ ಅಥವಾ ಇನ್ಯಾವುದೇ ಪಕ್ಷದೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಳ್ಳಿಹಾಕಿದ್ದಾರೆ. ತನ್ನ ಚುನಾವಣಾ ಕಾರ್ಯತಂತ್ರದ ಅಂಗವಾಗಿ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪಕ್ಷ ಹೆಸರಿಸಿಲ್ಲ ಎಂದು ಶಾ ಹೇಳಿದರು. ಉತ್ತರಪ್ರದೇಶದಲ್ಲಿ ಏಳು ಹಂತದ ವಿಧಾನಸಭೆ ಚುನಾವಣೆ ಪ್ರಕ್ರಿಯೆಯ ನಾಲ್ಕನೇ ಹಂತದ ಮತದಾನ ಇಂದು (ಫೆ.23) ನಡೆಯಲಿದೆ. ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಒಂದು ವೇಳೆ ವಿಧಾನಸಭೆಯಲ್ಲಿ ಬಹುಮತಕ್ಕೆ ಕೊರತೆಯಾದರೆ ಇತರ ಪಕ್ಷದೊಂದಿಗೆ ಮೈತ್ರಿಯ ಸಾಧ್ಯತೆೆಯಿಲ್ಲ ಎಂದರು.ರಾಜ್ಯದಲ್ಲಿ ಪ್ರಮುಖ ಮೂರು ಪಕ್ಷಗಳಾದ ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟ, ಬಿಎಸ್ಪಿ ಮತ್ತು ಬಿಜೆಪಿ ಬಹುಮತ ಪಡೆಯಲು ಕೆಲ ಸ್ಥಾನಗಳ ಕೊರತೆಯಾಗಬಹುದು ಎಂದು ಕೆಲವು ಚುನಾವಣಾ ಸಮೀಕ್ಷೆಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಶಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಉತ್ತರಪ್ರದೇಶದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕಾರ್ಯ ನಡೆಸಿರುವ ಶಾ, ಈ ಚುನಾವಣಾ ಫಲಿತಾಂಶ 2019ರ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಅದ್ಕಕಿಂತಲೂ ಮುಖ್ಯವಾಗಿ ಚುನಾವಣಾ ಫಲಿತಾಂಶ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಪ್ರಮುಖವಾಗಿದೆ ಎಂದು ತಿಳಿಸಿದ್ದಾರೆ. ಉತ್ತರ ಪ್ರದೇಶ, ಗೋವಾ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶಾ, ಆದರೆ ಪಂಜಾಬಿನಲ್ಲಿ ತ್ರಿಕೋನ ಸ್ಪರ್ಧೆ ಇರುವ ಕಾರಣ ಫಲಿತಾಂಶದ ಬಗ್ಗೆ ಏನನ್ನೂ ಹೇಳಲಾಗದು ಎಂದರು. ಉತ್ತರಪ್ರದೇಶದಲ್ಲಿ ತಮ್ಮ ಪಕ್ಷ ಗೆದ್ದ ಬಳಿಕ ವಿಜೇತ ಶಾಸಕರು ಒಟ್ಟು ಸೇರಿ ತಮ್ಮ ನಾಯಕನನ್ನು ಆರಿಸುತ್ತಾರೆ ಮತ್ತು ಇವರನ್ನು ಮುಖ್ಯಮಂತ್ರಿ ಎಂದು ಪಕ್ಷ ಹೈಕಮಾಂಡ್ ಘೋಷಿಸುತ್ತದೆ ಎಂದವರು ತಿಳಿಸಿದರು. ಇತ್ತೀಚೆಗೆ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ, ಸ್ಮಶಾನ ಮತ್ತು ದಫನ ಭೂಮಿಗೆ ಉತ್ತರಪ್ರದೇಶದಲ್ಲಿ ರಾಜ್ಯ ಸರಕಾರ ಭೂಮಿ ನೀಡುವ ವಿಷಯದ ಬಗ್ಗೆ ಮಾತಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಕೋಮುಬಣ್ಣ ಬಳಿಯಲು ಪ್ರಯತ್ನಿಸಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಟೀಕಾಕಾರರು ಮತ್ತು ಮಾಧ್ಯಮಗಳು ಈ ಬಗ್ಗೆ ಅಂಕಿ ಅಂಶಗಳನ್ನು ಮೊದಲು ನೋಡಬೇಕು. ಹಿಂದೂ ಮತ್ತು ಮುಸ್ಲಿಮರ ಮಧ್ಯೆ 80-20ರ ಜನಸಂಖ್ಯಾ ಅನುಪಾತ ಇದೆ. ಆದರೆ ದಫನ ಭೂಮಿಗೆ ಯುಪಿ ಸರಕಾರ 1,200 ಕೋಟಿ ವೆಚ್ಚ ಮಾಡಿದ್ದರೆ ಇದರ ಅರ್ಧಾಂಶದಷ್ಟು ಮೊತ್ತವನ್ನು ಮಾತ್ರ ಸ್ಮಶಾನಕ್ಕೆ ನೀಡಿದೆ ಎಂದರು. ಗುಜರಾತ್‌ನಲ್ಲಿ ಇಂತಹ ತಾರತಮ್ಯವಿಲ್ಲ. ಆದ್ದರಿಂದ ಈ ಪ್ರಶ್ನೆಯನ್ನು ಅಲ್ಲಿ ಪ್ರಸ್ತಾವಿಸಲಾಗುತ್ತಿಲ್ಲ ಎಂದ ಅವರು, ವಿರೋಧಿ ರಾಜಕೀಯ ಪಕ್ಷಗಳು ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಿದ್ದು ಇದನ್ನು ಪ್ರಸ್ತಾವಿಸಿದರೆ ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಹೆಸರಿಸಲಾಗುತ್ತದೆ ಎಂದು ಹೇಳಿದರು.





