‘ವಿಶ್ವಾಸಮತ’ದ ವಿರುದ್ಧ ಸ್ಟಾಲಿನ್ ಉಪವಾಸ ಸತ್ಯಾಗ್ರಹ
ತಿರುಚಿನಾಪಳ್ಳಿ, ಫೆ.22: ಡಿಎಂಕೆ ಕಾರ್ಯಾಧ್ಯಕ್ಷ ಸ್ಟಾಲಿನ್ ಇಲ್ಲಿನ ಉಳವರ್ ಸಂಧೈ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದು ಪಕ್ಷದ ಹಿರಿಯ ಸದಸ್ಯ ಕೆ.ಎನ್.ನೆಹ್ರು, ಐಯುಎಂಎಲ್ ಮುಖಂಡ ಕೆ.ಕೆ.ಕಾದರ್ ಮೊಹಿದೀನ್, ತಮಿಳು ಮಾನಿಲ ಕಾಂಗ್ರೆಸ್ (ಜಿ.ಕೆ.ವಾಸನ್ ನೇತೃತ್ವ)ನ ಸದಸ್ಯರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಫೆ.18ರಂದು ಮುಖ್ಯಮಂತ್ರಿ ಇ.ಪಳನಿಸ್ವಾಮಿ ವಿಶ್ವಾಸಮತ ಗೆದ್ದ ಸಂದರ್ಭ ವಿಧಾನಸಭೆಯಲ್ಲಿ ‘ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ’ ಎಂದು ಆರೋಪಿಸಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗಿದ್ದು ಇದಕ್ಕೆ ಪೂರಕವಾಗಿ ರಾಜ್ಯದಾದ್ಯಂತ ವಿವಿಧೆಡೆ ಪಕ್ಷದ ಕಾರ್ಯಕರ್ತರು, ಮುಖಂಡರು ಉಪವಾಸ ಸತ್ಯಾಗ್ರಹ ಕೈಗೊಂಡರು. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಅನುಕೂಲವಾಗುವಂತೆ ತಮ್ಮ ಪಕ್ಷದ (ಡಿಎಂಕೆ) ಶಾಸಕರನ್ನು ಬಲವಂತವಾಗಿ ವಿಧಾನಸಭೆಯಿಂದ ಹೊರದೂಡಲಾಗಿದೆ. ಇದು ವಿಧಾನಸಭೆಯ ಸಂಪ್ರದಾಯ ಮತ್ತು ಕಾನೂನಿಗೆ ವಿರುದ್ಧವಾಗಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಖಂಡಿಸಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಸ್ಟಾಲಿನ್ ಹೇಳಿದರು. ಈ ಮಧ್ಯೆ, ಪುದುಚೇರಿಯಲ್ಲಿ ಹೇಳಿಕೆ ನೀಡಿದ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ, ವಿಶ್ವಾಸ ಮತಯಾಚನೆ ಸಂದರ್ಭ ರಹಸ್ಯ ಮತದಾನ ನಡೆಯಬೇಕು ಎಂಬ ವಿಪಕ್ಷದ ಬೇಡಿಕೆಯನ್ನು ತಮಿಳುನಾಡು ಅಸೆಂಬ್ಲಿ ಸ್ಪೀಕರ್ ಒಪ್ಪಬೇಕಿತ್ತು ಎಂದರು. ಇಲ್ಲಿ ಡಿಎಂಕೆ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, ಬೇಡಿಕೆಗೆ ಸ್ಪಂದಿಸುವುದು ಸ್ಪೀಕರ್ ಅವರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ ಎಂದರು. ಎರಡೂವರೆ ದಶಕ ಸಂಸದನಾಗಿ ಕಾರ್ಯ ನಿರ್ವಹಿಸಿದ ಅನುಭವದಲ್ಲಿ ಹೇಳುತ್ತಿದ್ದೇನೆ, ಸರಕಾರದ ಬಹುಮತ ಸಾಬೀತಿನ ಸಂದರ್ಭ ರಹಸ್ಯ ಮತದಾನದ ಬೇಡಿಕೆ ಬಂದರೆ ತಕ್ಷಣ ಅನುಮತಿ ನೀಡಲಾಗುತ್ತದೆ. ಇದೇ ರೀತಿ ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಪಕ್ಷಗಳಾದ ಡಿಎಂಕೆ, ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳು ವಿಶ್ವಾಸಮತದ ಬೇಡಿಕೆ ಮುಂದಿಟ್ಟಾಗ ಸ್ಪೀಕರ್ ನಿರಾಕರಿಸಿದರು. ವಿಧಾನಸಭೆಯಲ್ಲಿ ನಡೆದ ಅಹಿತಕರ ಘಟನೆಗೆ ಇದು ಕಾರಣವಾಯಿತು ಎಂದವರು ಹೇಳಿದರು. ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್ ಅವರ ಸಹಿತ ಪಕ್ಷದ ಶಾಸಕರನ್ನು ಬಲವಂತವಾಗಿ ಹೊರದಬ್ಬಿರುವ ಘಟನೆಯನ್ನು ಬಲವಾಗಿ ವಿರೋಧಿಸಬೇಕು ಮತ್ತು ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇಂತಹ ಘಟನೆಗಳನ್ನು ಸಹಿಸಲಾಗದು ಎಂದರು. ಪ್ರಸ್ತುತ ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಪಳನಿಸ್ವಾಮಿ ನೇತೃತ್ವದ ಸರಕಾರ ಜನರ ತೀರ್ಪಿನಂತೆ ಅಧಿಕಾರಕ್ಕೆ ಬಂದಿಲ್ಲ ಮತ್ತು ರಾಜ್ಯದ ಜನತೆಯಲ್ಲಿ ಈ ಸರಕಾರದ ವಿರುದ್ಧದ ಅಸಮಾಧಾನ ಹೆಚ್ಚುತ್ತಿದ್ದು ಇದನ್ನು ಕಡೆಗಣಿಸಲಾಗದು ಎಂದ ಅವರು, ನೆರೆಯ ರಾಜ್ಯದಲ್ಲಿ ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ಅಧಿಕಾರಕ್ಕೆ ಬಂದಿರುವ ಎಐಎಡಿಎಂಕೆ ಪಕ್ಷದ ಸರಕಾರದ ವಿರುದ್ಧದ ಹೋರಾಟದಲ್ಲಿ ಡಿಎಂಕೆ ಜೊತೆ ಕಾಂಗ್ರೆಸ್ ಸದಾ ಕೈಜೋಡಿಸಲಿದೆ ಎಂದರು. ಪುದುಚೇರಿ ವಿಧಾನಸಭೆಯಲ್ಲಿ ಇಬ್ಬರು ಸದಸ್ಯರನ್ನು ಹೊಂದಿರುವ ಡಿಎಂಕೆ, ಕಾಂಗ್ರೆಸ್ ಮೈತ್ರಿಕೂಟದ ಸದಸ್ಯನಾಗಿದ್ದು ಸರಕಾರಕ್ಕೆ ಬಾಹ್ಯ ಬೆಂಬಲ ನೀಡುತ್ತಿದೆ.





