ಇತಿಹಾಸದ ಪುಟ ಸೇರಲಿರುವ ಐಎನ್‌ಎಸ್ ವಿರಾಟ್
ಮುಂಬೈ,ಫೆ.22: 350 ಕೆ.ಜಿ.ಅಕ್ಕಿ, 7,000 ಪರಾಠಾಗಳು, 200 ಕೆ.ಜಿ. ಮಟನ್, 80 ಕೆ.ಜಿ. ಬೇಳೆ ಮತ್ತು 300 ಕೆ.ಜಿ. ತರಕಾರಿಗಳು... ಇವು ಭಾರತದ ರಾಜಗಾಂಭೀರ್ಯದ ವಿಮಾನ ವಾಹಕ ನೌಕೆ ಐಎನ್‌ಎಸ್ ವಿರಾಟ್ ಸೇವೆಯಲ್ಲಿದ್ದಾಗ ಹಡಗಿನಲ್ಲಿ ಬಳಕೆಯಾಗುತ್ತಿದ್ದ ದೈನಂದಿನ ಅಡುಗೆ ಸಾಮಗ್ರಿಗಳು.
ಭಾರತದ ನೌಕಾಪಡೆಗೆ ಸೇರ್ಪಡೆಗೊಳ್ಳುವ ಮುನ್ನ ಐಎನ್‌ಎಸ್ ವಿರಾಟ್ ‘ಎಚ್‌ಎಂಎಸ್ ಹರ್ಮಿಸ್’ ಎಂಬ ತನ್ನ ಪೂರ್ವನಾಮದೊಡನೆ ಬ್ರಿಟನ್ನಿನ ರಾಯಲ್ ನೇವಿಯಲ್ಲಿ 27 ವರ್ಷಗಳ ಸೇವೆ ಸಲ್ಲಿಸಿತ್ತು ಮತ್ತು ಬ್ರಿಟಿಷ್ ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಿರುವ ಪ್ರಿನ್ಸ್ ಚಾರ್ಲ್ಸ್ ಅವರು ಈ ನೌಕೆಯಲ್ಲಿ ಸೇವೆ ಸಲ್ಲಿಸಿದ್ದರು. ದೇಶದ ಎರಡನೇ ಸೆಂಟಾರ್ ವರ್ಗದ ವಿಮಾನ ವಾಹಕ ನೌಕೆಯಾದ ಐಎನ್‌ಎಸ್ ವಿರಾಟ್ ಭಾರತೀಯ ನೌಕಾಪಡೆಯಲ್ಲಿ 29 ವರ್ಷಗಳ ಸೇವೆಯನ್ನು ಸಲ್ಲಿಸಿದೆ. ತನ್ಮೂಲಕ ಒಟ್ಟು 56ವರ್ಷಗಳ ಕಾಲ ಕಾರ್ಯನಿರತವಾಗಿದ್ದ ಈ ನೌಕೆ ಸೇವೆಯಲ್ಲಿರುವ ವಿಶ್ವದ ಅತ್ಯಂತ ಹಳೆಯ ಯುದ್ಧನೌಕೆ ಎಂಬ ಗಿನ್ನೆಸ್ ದಾಖಲೆಗೂ ಪಾತ್ರವಾಗಿದೆ.
ಆಪರೇಷನ್ ಜ್ಯುಪಿಟರ್, ಆಪರೇಷನ್ ಪರಾಕ್ರಮ್ ಮತ್ತು ಆಪರೇಷನ್ ವಿಜಯ್‌ಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಐಎನ್‌ಎಸ್ ವಿರಾಟ್ ಮಾರ್ಚ್ 6ರಂದು ನೌಕಾಪಡೆಯಲ್ಲಿ ತನ್ನ ಸೇವೆಗೆ ವಿದಾಯ ಹೇಳಲಿದೆ. ಈ ಸಂಬಂಧ ಮುಂಬೈನಲ್ಲಿ ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಅವರು ವಹಿಸಲಿದ್ದಾರೆ.
226.5 ಮೀ. ಉದ್ದ ಮತ್ತು 48.78 ಮೀ. ಅಗಲ ಹೊಂದಿರುವ ಐಎನ್‌ಎಸ್ ವಿರಾಟ್‌ನಲ್ಲಿ 150 ಅಧಿಕಾರಿಗಳು ಮತ್ತು 1,500 ನಾವಿಕ ಸಿಬ್ಬಂದಿಯಿದ್ದಾರೆ. ಪುಟ್ಟ ನಗರದಂತಿರುವ ಈ ನೌಕೆ ಗ್ರಂಥಾಲಯ, ಜಿಮ್ನಾಷಿಯಂ, ಎಟಿಎಂ, ಟಿವಿ ಮತ್ತು ವೀಡಿಯೊ ಸ್ಟುಡಿಯೊ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಒಳಗೊಂಡಿದೆ.
ಎಲ್ಲ ತುರ್ತುಸ್ಥಿತಿಗಳಿಗೂ ಸ್ಪಂದಿಸಲು ಸುಸಜ್ಜಿತ ಆಸ್ಪತ್ರೆ ಮತ್ತು ದಂತ ಚಿಕಿತ್ಸಾ ಕೇಂದ್ರವೂ ನೌಕೆಯಲ್ಲಿದೆ. ಬ್ರಿಟಿಷ್ ನಿರ್ಮಿತ ಯುದ್ಧನೌಕೆಗಳು ಶಾಂತಿಕಾಲದಲ್ಲಿಯೂ ಸಹ ಅದರಲ್ಲಿರುವವರ ಅನುಕೂಲಕ್ಕಾಗಿ ಎಲ್ಲ ಸೌಲಭ್ಯಗಳೊಂದಿಗೆ ಸಜ್ಜಿತವಾಗಿರುತ್ತವೆ.
ನೌಕೆಯಲ್ಲಿರುವ ಲಾಂಡ್ರಿ ಪ್ರತಿ ದಿನ 800 ಜೋಡಿಗೂ ಅಧಿಕ ಸಮವಸ್ತ್ರಗಳನ್ನು ಒಗೆದು ಸ್ವಚ್ಛಗೊಳಿಸುತ್ತದೆ, ಟೇಲರಿಂಗ್ ಶಾಪ್ ಮತ್ತು ಕ್ಷೌರಕ್ಕಾಗಿ ಸಲೂನ್ ಕೂಡ ಇದೆ. ಭಾರತೀಯ ನೌಕಾಪಡೆಯ ಇತರ ಯಾವುದೇ ನೌಕೆಯಲ್ಲಿಲ್ಲದ, ತನ್ನ ಬ್ರಿಟಿಷ್ ಮೂಲವನ್ನು ನೆನಪಿಸುವ ಕ್ರೈಸ್ತರ ಕಿರು ಇಗರ್ಜಿ ‘ಚಾಪೆಲ್’ ಮತ್ತು ಸ್ಮಶಾನ ಐಎನ್‌ಎಸ್ ವಿರಾಟ್‌ನಲ್ಲಿವೆ.
ನೌಕೆಯ ಅಗ್ರತುದಿಯಲ್ಲಿ ಗರುಡ ಮತ್ತು ಐದು ಬಾಣಗಳ ಸಂಕೇತವಿದ್ದು, ಗರುಡ ವಾಯುಶಕ್ತಿಯನ್ನು ಸೂಚಿಸುತ್ತದೆ.





