ಫೆ.27: ಗ್ರಾಮಸ್ಥ ರಿಂದ ಗ್ರಾಪಂಗೆ ಮುತ್ತಿಗೆ
ಮೂಡುಬಿದಿರೆ, ಫೆ.22: ಗ್ರಾಮಸ್ಥರ ಗಮನಕ್ಕೆ ತರದೆ ಏಕಾಏಕಿ ಮನೆ ತೆರಿಗೆಯನ್ನು ಹೆಚ್ಚಿಸಿರುವುದಕ್ಕೆ ಮತ್ತು ಪಂಚಾಯತ್ ಅಧ್ಯಕ್ಷರು, ಕೆಲವು ಸದಸ್ಯರು ಹಾಗೂ ಅಧಿಕಾರಿ ವರ್ಗದವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಫೆ.27ರಂದು ಹೊಸಬೆಟ್ಟು ಗ್ರಾಪಂಗೆ ಮುತ್ತಿಗೆ ಮತ್ತು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥ ಲಿಯೋ ವಾಲ್ಟರ್ ನಝ್ರತ್ ಸುದ್ದಿಗೋಷ್ಠಿಯಲ್ಲಿಂದು ಹೇಳಿದ್ದಾರೆ. ಹೊಸಬೆಟ್ಟು ಗ್ರಾಪಂ ಇತ್ತೀಚೆಗೆ ಸುಮಾರು ಶೇ.30ರಷ್ಟು ಮನೆ ತೆರಿಗೆ ಹೆಚ್ಚಿಸಿದ್ದು, ಇದನ್ನು ಕಡಿಮೆಗೊಳಿಸುವಂತೆ ಮತ್ತು ಈ ಬಗ್ಗೆ ವಿಶೇಷ ಗ್ರಾಮಸಭೆ ಕರೆಯುವಂತೆ ಫೆ.13ರಂದು ಗ್ರಾಪಂಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದನ್ನು ಗ್ರಾಪಂ ನಿರ್ಲಕ್ಷಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಅಶ್ವಿನ್ ಜೊಸ್ಸಿ ಪಿರೇರ, ಬಿಜೆಪಿ ದ.ಕ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜೊಯ್ಲಸ್ ಡಿಸೋಜ, ಗ್ರಾಮಸ್ಥರಾದ ಶ್ಯಾಂ ಮಡಿವಾಳ, ವಿಲ್ಫ್ರೆಡ್ ಮೆಂಡೋನ್ಸಾ, ಭಾಸ್ಕರ ಆಚಾರ್ಯ, ಸಚೀಂದ್ರ ಎಸ್. ಉಪಸ್ಥಿತರಿದ್ದರು.





