ಕಾಸರಗೋಡು ಕನ್ನಡ ವಿದ್ಯಾರ್ಥಿಗಳಿಗೆ ಅನ್ಯಾಯ
ಜಿಪಂ ಸಭೆಯಲ್ಲಿ ಅದಿಕಾರಿಗಳ ವಿರುದ್ಧ ಆಕ್ರೋಶ
ಮಂಜೇಶ್ವರ ೆೆ.22: ಕರ್ನಾಟಕ ಸಿಇಟಿ ಪ್ರವೇಶಾತಿಗೆ ಅರ್ಜಿ ಕನ್ನಡ ಭಾಷೆಯಲ್ಲಿರುವ ಏಕೈಕ ಕಾರಣಕ್ಕೆ ಸಹಿ ಹಾಕದೆ ನಿರಾಕರಿಸುವ ಕಾಞಂಗಾಡು ಉಪಜಿಲ್ಲಾ ವಿದ್ಯಾಕಾರಿ ಹಾಗೂ ಹೊಸದುರ್ಗ ವಿದ್ಯಾಕಾರಿಗಳ ಕನ್ನಡ ವಿರೋಧೋರಣೆಯನ್ನು ಖಂಡಿಸಿ ಜಿಪಂ ಸಾಮಾನ್ಯಸಭೆಯಲ್ಲಿ ಜಿಪಂ ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷ ಹರ್ಷಾದ್ ವರ್ಕಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಿಇಟಿ ಅರ್ಜಿ ನಮೂನೆಯಲ್ಲಿ ಕನ್ನಡಿಗರೆಂಬುದನ್ನು ಧೃಢೀಕರಿಸುವ ಕಾಲಂಗೆ ಶಾಲಾ ಮುಖ್ಯೋಪಾಧ್ಯಾಯರು ದೃಢಪಡಿಸಿದ ಬಳಿಕ ವಿದ್ಯಾಕಾರಿಗಳು ಸಹಿ ಹಾಕಬೇಕಿದ್ದು, ಅರ್ಜಿ ನಮೂನೆಯು ಕನ್ನಡ ಭಾಷೆಯಲ್ಲಿರುವ ಕಾರಣಕ್ಕಾಗಿ ಸಹಿ ಹಾಕಲು ನಿರಾಕರಿಸುತ್ತಿದ್ದಾರೆ ಎಂದು ಸಭೆಯಲ್ಲಿ ಹರ್ಷಾದ್ ವರ್ಕಾಡಿ ಆರೋಪಿಸಿದರು. ಕರ್ನಾಟಕದ ಸಿಇಟಿ ಅರ್ಜಿ ನಮೂನೆಯು ಕನ್ನಡದಲ್ಲಿದ್ದು, ಕನ್ನಡ ಕಲಿತವರೆಂಬುದನ್ನು ದೃಢಪಡಿಸುವ ಕಾಲಂ ಇದೇ ಅರ್ಜಿ ಪಾರಂನಲ್ಲಿ ಭರ್ತಿಮಾಡಬೇಕಿದ್ದು, ಇದೇ ಅರ್ಜಿಯಲ್ಲಿ ಜಿಲ್ಲಾ ವಿದ್ಯಾಕಾರಿಗಳು ದೃಢಪಡಿಸಿ ಸಹಿ ಹಾಕಬೇಕು. ಆದರೆ ಕನ್ನಡ ಭಾಷೆಯ ಅರ್ಜಿಗೆ ತಾನು ಸಹಿ ಹಾಕುವುದು ಅಸಾಧ್ಯವೆಂಬ ವಿದ್ಯಾಕಾರಿಯ ನಿಲುವಿನಿಂದ ಹಲವಾರು ಕನ್ನಡ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗುವ ಸಾಧ್ಯತೆ ಜಾಸ್ತಿಯಾಗಿದೆ.
ಈ ಬಗ್ಗೆ ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಕಚೇರಿಯ ಅಕೃತರಿಗೆ ಜಿಪಂ ಅಧ್ಯಕ್ಷರು ನಿರ್ದೇಶನ ನೀಡಿ, ಕಚೇರಿಯಲ್ಲಿರುವ ಕನ್ನಡ ಸಿಬ್ಬಂದಿ ಅಥವಾ ಕನ್ನಡ ಅಧ್ಯಾಪಕರ ನೆರವನ್ನು ಪಡೆದು, ಅರ್ಜಿ ಪರಿಶೀಲಿಸಿ ಸಹಿ ಹಾಕಿ ಸಹಕರಿಸುವಂತೆ ನಿರ್ದೇಶಿಸಿದ್ದಾರೆ.





