ಪಡಿತರ ಚೀಟಿ ಪರಿಶೀಲನೆ: ವಿಎಗಳಿಂದ ವಿರೋಧ
ಮಂಗಳೂರು, ೆ.22: ಪಡಿತರ ಚೀಟಿಗಾಗಿ ಸಲ್ಲಿಸಿದ ಅರ್ಜಿದಾರರ ಮನೆ ಸಂಖ್ಯೆ, ವಿಳಾಸ, ಆದಾಯ, ಮನೆಯ ವಿಸ್ತೀರ್ಣ, ಮನೆಯವರ ಸಂಖ್ಯೆ, ವಯಸ್ಸು ಇತ್ಯಾದಿಯ ಬಗ್ಗೆ ಪರಿಶೀಲನೆಯನ್ನು ಈವರೆಗೆ ಗ್ರಾಪಂ ಅಭಿವೃದ್ಧಿ ಅಕಾರಿ (ಪಿಡಿಒ)ಯ ಜವಾಬ್ದಾರಿಯಾಗಿತ್ತು.
ಆದರೆ, ಇತ್ತೀಚೆಗೆ ಸರಕಾರ ಹೊಸ ಆದೇಶ ಹೊರಡಿಸಿ, ಆ ಜವಾಬ್ದಾರಿಯನ್ನು ಗ್ರಾಮ ಲೆಕ್ಕಾಕಾರಿ (ವಿ.ಎ.)ಗೆ ವಹಿಸಿದೆ. ಆದರೆ ಇದಕ್ಕೆ ಗ್ರಾಮ ಲೆಕ್ಕಾಕಾರಿಗಳ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಇತ್ತೀಚೆಗೆ ಸಭೆ ನಡೆಸಿದ್ದ ಸಂಘವು ಬುಧವಾರ ದ.ಕ. ಜಿಲ್ಲಾಕಾರಿಗೆ ಮನವಿ ಸಲ್ಲಿಸಿ ತಮ್ಮನ್ನು ಈ ಹೊಣೆಯಿಂದ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದೆ. ಪಡಿತರ ಚೀಟಿ ಪರಿಶೀಲನಾ ಕಾರ್ಯದ ಹೊಣೆಯು ಈ ಹಿಂದೆ ಗ್ರಾಮ ಲೆಕ್ಕಾಕಾರಿಗಳಿಗೆ ಇತ್ತು. ಈ ಸಂದರ್ಭ ಹಲವು ಕಡೆ ಗ್ರಾಮ ಲೆಕ್ಕಾಕಾರಿಗಳ ಮೇಲೆ ಹಲ್ಲೆ ನಡೆಸಲಾಗಿತ್ತು. ಇದರ ವಿರುದ್ಧ ಗ್ರಾಮ ಲೆಕ್ಕಾಕಾರಿಗಳ ಸಂಘ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರ ಈ ಜವಾಬ್ದಾರಿಯಿಂದ ಮುಕ್ತಿಗೊಳಿಸಿತ್ತು. ಇದೀಗ ಹಾಲಿ ಸರಕಾರ ಮತ್ತೆ ಈ ಹೊಣೆ ಹೊರಿಸಿದೆ. ಇದರ ವಿರುದ್ಧ ಗ್ರಾಮ ಲೆಕ್ಕಾಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಗ್ರಾಮ ಲೆಕ್ಕಾಕಾರಿಗಳಿಗೆ ವಿವಿಧ ಅರ್ಜಿಗಳ ವಿಲೇವಾರಿ ಕಾರ್ಯವಿದೆ. ಕೆಲಸದ ಒತ್ತಡದಿಂದ ಪಡಿತರ ಚೀಟಿ ಪರಿಶೀಲನಾ ಕಾರ್ಯ ಅಸಾಧ್ಯ. ಹಾಗಾಗಿ ಈ ಕಾರ್ಯದಿಂದ ಮುಕ್ತಗೊಳಿಸಬೇಕು ಎಂದು ಸಂಘವು ಆಗ್ರಹಿಸಿದೆ.
ಕಂದಾಯ ನೌಕರರ ಸಂಘದ ಅಧ್ಯಕ್ಷ ಹಾಗೂ ಉಪತಹಶೀಲ್ದಾರ್ ಸೀತಾರಾಮ್, ಗ್ರಾಮ ಲೆಕ್ಕಾಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಮಂಗಳೂರು ತಾಲೂಕು ಅಧ್ಯಕ್ಷ ಸಿ.ಆರ್.ಮಹೇಶ್, ಬಂಟ್ವಾಳ ತಾಲೂಕು ಅಧ್ಯಕ್ಷ ಜನಾರ್ದನ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪ್ರದೀಪ್, ಸುಳ್ಯ ತಾಲೂಕು ಅಧ್ಯಕ್ಷ ಹೊನ್ನಪ್ಪ ಗೌಡ, ಪುತ್ತೂರು ತಾಲೂಕು ಅಧ್ಯಕ್ಷ ಹರೀಶ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.







