ಭಾಷಣ ಮಾಡಲು ಈ ದೊಣ್ಣೆ ನಾಯಕರ ಅಪ್ಪಣೆ ಬೇಡ
ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅರಳಿ ನಿಂತಿದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರೂಪಿಸಿದ ಸಂವಿಧಾನ ಈ ಜನತಂತ್ರದ ಆಧಾರಸ್ತಂಭವಾಗಿದೆ. ಈ ಸಂವಿಧಾನ ನಮಗೆ ವಾಕ್ ಸ್ವಾತಂತ್ರ ಸಹಿತ ಹಲವಾರು ಸ್ವಾತಂತ್ರಗಳನ್ನು ನೀಡಿದೆ. ಸಮಾನತೆಯ ಕನಸು ನನಸಾಗಿಸಲು ಈ ಸಂವಿಧಾನ ದಾರಿದೀಪವಾಗಿದೆ. ಆದರೆ, ಈ ಸಂವಿಧಾನದ ಆಶಯಗಳನ್ನು ಸಹಿಸದ ಶಕ್ತಿಗಳು ನಿರಂತರವಾಗಿ ಇದರ ನಾಶಕ್ಕೆ ಹುನ್ನಾರ ನಡೆಸುತ್ತಲೇ ಬಂದಿವೆ. ರಾಜ್ಯಾಂಗದತ್ತವಾದ ವಾಕ್ ಸ್ವಾತಂತ್ರದ ಮೇಲೆ ಕೋಮುವಾದಿ ಶಕ್ತಿಗಳು ಈಗ ದಾಳಿ ಆರಂಭಿಸಿವೆ. ಯಾರು ಎಲ್ಲಿ ಭಾಷಣ ಮಾಡಬೇಕಾದರೂ ಇವರ ಅಪ್ಪಣೆ ಪಡೆಯಬೇಕಾಗಿ ಬಂದಿದೆ. ಪೊಲೀಸರ ಅನುಮತಿ ಪಡೆದರೆ ಸಾಲದು ಈ ದೊಣ್ಣೆ ನಾಯಕರ ಒಪ್ಪಿಗೆ ಕೂಡಾ ಪಡೆದು ಭಾಷಣ ಮಾಡಬೇಕಾದ ದಿನಗಳು ಬಂದಿವೆ.
ದಿಲ್ಲಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಭಾಷಣ ಮಾಡಲು ಬಂದ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ನಾಯಕ ಉಮರ್ ಖಾಲಿದ್ ಅವರಿಗೆ ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳು ಅಡ್ಡಿಯುಂಟು ಮಾಡಿದ್ದಾರೆ. ಈಗ ಕರ್ನಾಟಕದಲ್ಲಿ ಫೆ.25ರಂದು ಮಂಗಳೂರಿಗೆ ಬರಲಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭಾಷಣ ಮಾಡಲು ಬಿಡುವುದಿಲ್ಲ ಎಂದು ಸಂಘಪರಿವಾರದ ಸಂಘಟನೆಗಳು ಬೆದರಿಕೆ ಹಾಕಿವೆ. ಶನಿವಾರ ಮಂಗಳೂರಿನಲ್ಲಿ ಸಭೆ ನಡೆಸಿದ ಬಿಜೆಪಿ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಮುಂತಾದ ಸಂಘಟನೆಗಳ ನಾಯಕರ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಶತಾಯಗತಾಯ ಪಿಣರಾಯಿ ವಿಜಯನ್ ಭಾಷಣ ತಡೆಯಬೇಕೆಂದು ಆರೆಸ್ಸೆಸ್ ತನ್ನ ಸಹಸಂಘಟನೆಗಳ ಮುಖಂಡರಿಗೆ ಆದೇಶ ನೀಡಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಭಾಷಣವನ್ನು ತಡೆಯಲು ಸಂಘಪರಿವಾರ ಹಲವಾರು ಸಂಚುಗಳನ್ನು ರೂಪಿಸಿದೆ. ರಸ್ತೆಮಾರ್ಗ ಅಥವಾ ವಿಮಾನದ ಮೂಲಕವಾಗಲಿ ಪಿಣರಾಯಿ ವಿಜಯನ್ ಮಂಗಳೂರು ಪ್ರವೇಶಿಸದಂತೆ ತಡೆಯುವುದಾಗಿ ಸಂಘಪರಿವಾರದ ಮುಖಂಡರು ಹೇಳಿದ್ದಾರೆ. ಪಿಣರಾಯಿ ವಿಜಯನ್ ಭಾಷಣ ಮಾಡಲಿರುವ ಏಕತಾ ಸಮಾವೇಶದ ದಿನ ಮಂಗಳೂರು ಬಂದ್ ನಡೆಸುವಂತೆ ವರ್ತಕರಿಗೆ ಬೆದರಿಕೆ ಹಾಕಲಾಗುತ್ತಿದೆ. ಅಷ್ಟೇ ಅಲ್ಲ ಈ ಭಾಷಣಕ್ಕೆ ಅನುಮತಿ ನೀಡದಂತೆ ಪೊಲೀಸರ ಮೇಲೂ ಒತ್ತಡ ಹೇರಲಾಗುತ್ತಿದೆ.
ಕೇರಳದ ಹಿಂದುಳಿದ ಈಳವ ಸಮಾಜದಿಂದ ಬಂದ ಪಿಣರಾಯಿ ವಿಜಯನ್ ಹೋರಾಟದ ಮೆಟ್ಟಿಲು ಹತ್ತಿ ಮುಖ್ಯಮಂತ್ರಿಯಾದವರು. ಕೇರಳದ ಕೋಟ್ಯಂತರ ಜನರ ಜನಪ್ರಿಯ ನಾಯಕನಾದ ಇವರಿಗೆ ಭಾಷಣ ಮಾಡಲು ಬಿಡುವುದಿಲ್ಲ ಎಂದು ಹೇಳಿದರೆ ಏನರ್ಥ. ಒಂದು ರಾಜ್ಯದ ಮುಖ್ಯಮಂತ್ರಿಗೇ ಈ ಸ್ಥಿತಿ ಬಂದರೆ ದೇಶದ ಉಳಿದ ಪ್ರಜೆಗಳ ಪಾಡೇನು? ಕೇರಳದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದೆ, ಅದಕ್ಕೆ ಪಿಣರಾಯಿ ವಿಜಯನ್ ಕಾರಣ, ಹೀಗಾಗಿ ಅವರನ್ನು ಭಾಷಣ ಮಾಡಲು ಬಿಡುವುದಿಲ್ಲ ಎಂಬುದು ಸಂಘಪರಿವಾರದ ಆಕ್ಷೇಪವಾಗಿದೆ. ಆದರೆ, ಕೇರಳದ ಘರ್ಷಣೆಗಳಿಗೂ ಹಿಂದೂಗಳಿಗೂ ಯಾವುದೇ ಸಂಬಂಧ ಇಲ್ಲ. ಅಲ್ಲಿ ನಡೆದಿರುವುದು ಸಿಪಿಎಂ ಮತ್ತು ಆರೆಸ್ಸೆಸ್ ಕಾರ್ಯಕರ್ತರ ನಡುವಿನ ಘರ್ಷಣೆ. ಆರೆಸ್ಸೆಸ್ ನಡೆಸಿದ ದಾಳಿಯಿಂದ ಇತ್ತೀಚಿನ ಐದು ವರ್ಷಗಳಲ್ಲಿ 300ಕ್ಕೂ ಹೆಚ್ಚು ಕಮ್ಯುನಿಸ್ಟ್ ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆ. ಅವರಲ್ಲಿ ಅನೇಕರು ಹಿಂದೂಗಳು. ಈ ವಾಸ್ತವಾಂಶವನ್ನು ಬಚ್ಚಿಟ್ಟು ಸಂಘಪರಿವಾರ ‘ಹಿಂದೂ’ ಶಬ್ದದ ಸೋಗಿನಲ್ಲಿ ಅವ್ಯಾಹತವಾಗಿ ಅನಾಚಾರ ನಡೆಸುತ್ತಿದೆ.
ಪಿಣರಾಯಿ ವಿಜಯನ್ ಅವರು ಇತ್ತೀಚೆಗೆ ಮಧ್ಯಪ್ರದೇಶಕ್ಕೆ ಹೋಗಿದ್ದರು. ಅಲ್ಲಿ ಕೇರಳ ಸಾಂಸ್ಕೃತಿಕ ಸಂಘದವರು ಭೋಪಾಲ್‌ನಲ್ಲಿ ಅವರ ಸಭೆಯೊಂದನ್ನು ಏರ್ಪಡಿಸಿದ್ದರು. ಅಲ್ಲಿಯೂ ಕೂಡಾ ಅವರ ಭಾಷಣಕ್ಕೆ ಸಂಘಪರಿವಾರ ಅಡ್ಡಿಯುಂಟು ಮಾಡಿತ್ತು. ಅಲ್ಲಿನ ಬಿಜೆಪಿ ಸರಕಾರ ಕೇರಳ ಮುಖ್ಯಮಂತ್ರಿಗಳಿಗೆ ರಕ್ಷಣೆ ನೀಡಲು ನಿರಾಕರಿಸಿತು. ಕರ್ನಾಟಕದಲ್ಲೂ ಅಂತಹ ಸ್ಥಿತಿ ನಿರ್ಮಾಣವಾಗಬಾರದು. ಕರ್ನಾಟಕದ ಕಾಂಗ್ರೆಸ್ ಸರಕಾರ ಸಂಘಪರಿವಾರದ ಈ ಒತ್ತಡಕ್ಕೆ ಮಣಿಯದೆ ಕೇರಳ ಮುಖ್ಯಮಂತ್ರಿಯವರ ಭಾಷಣಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು. ಈ ಭಾಷಣಕ್ಕೆ ತಡೆಯೊಡ್ಡುವುದಾಗಿ ಹೇಳಿದ ವ್ಯಕ್ತಿಗಳು ಸಂಸದರೇ ಆಗಿರಲಿ, ಶಾಸಕರೇ ಆಗಿರಲಿ ಅವರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕು. ಇದು ಕಮ್ಯುನಿಸ್ಟ್ ನಾಯಕರೊಬ್ಬರ ಭಾಷಣದ ಪ್ರಶ್ನೆಯಲ್ಲ. ಒಂದು ರಾಜ್ಯದ ಸಂವಿಧಾನಬದ್ಧ ಮುಖ್ಯಮಂತ್ರಿಯ ವಾಕ್ ಸ್ವಾತಂತ್ರದ ರಕ್ಷಣೆ ಇದರಲ್ಲಿ ಅಡಕವಾಗಿದೆ. ಯಾವುದೋ ಸಂವಿಧಾನೇತರ ಸಂಘಟನೆಗಳು ಬೆದರಿಕೆ ಹಾಕುತ್ತವೆ ಎಂದು ಭಾಷಣ ಮಾಡದೆ ಇರಲು ಆಗುವುದಿಲ್ಲ. ಅಷ್ಟಕ್ಕೂ ಅವರು ಮಂಗಳೂರಿನಲ್ಲಿ ಮಾಡುತ್ತಿರುವ ಭಾಷಣ ಕೋಮುಸೌಹಾರ್ದಕ್ಕೆ ಸಂಬಂಧಿಸಿದ್ದು.
ಕೋಮುಸೌಹಾರ್ದ ಅಂದರೆ ಹೆದರುವ ಸಂಘಪರಿವಾರಕ್ಕೆ ಈ ಭಾಷಣದಿಂದ ತನ್ನ ವೋಟ್‌ಬ್ಯಾಂಕ್ ಎಲ್ಲಿ ಛಿದ್ರಛಿದ್ರವಾಗಿ ಹೋಗುವುದೋ ಎಂಬ ಭಯ ಉಂಟಾಗಿದೆ. ಪಿಣರಾಯಿ ವಿಜಯನ್ ಮಾತ್ರವಲ್ಲ ಯಾವುದೇ ಪಕ್ಷ, ಪಂಗಡ, ಸಂಘಟನೆಗೆ ಸೇರಿದವರು ಕೂಡಾ ಭಾಷಣ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಈ ಅವಕಾಶವನ್ನೇ ಬಳಸಿಕೊಂಡು ಪ್ರವೀಣ್ ತೊಗಾಡಿಯಾ, ಸಾಕ್ಷಿ ಮಹಾರಾಜ್, ಮಹಂತ ಅವೈದ್ಯನಾಥ್ ಮತ್ತು ಪ್ರಮೋದ್ ಮುತಾಲಿಕ್ ಅಂತಹವರು ಕೋಮು ಹಿಂಸೆಗೆ ಪ್ರಚೋದನೆ ನೀಡುವ ಭಾಷಣಗಳನ್ನು ಮಾಡುತ್ತಲೇ ಬಂದಿದ್ದಾರೆ. ಗುಜರಾತ್ ಹತ್ಯಾಕಾಂಡದ ಕಳಂಕ ಅಂಟಿಸಿಕೊಂಡಿರುವ ನರೇಂದ್ರ ಮೋದಿ ಕೂಡಾ ಮಂಗಳೂರಿಗೆ ಈ ಹಿಂದೆ ಬಂದಿದ್ದರು. ಅವರೊಂದಿಗೆ ಭಿನ್ನಾಭಿಪ್ರಾಯವಿರುವ ಕಮ್ಯುನಿಸ್ಟರಾಗಲಿ, ಕಾಂಗ್ರೆಸ್‌ನವರಾಗಲಿ ಅವರ ಭಾಷಣಕ್ಕೆ ಅಡ್ಡಿಯುಂಟು ಮಾಡಲಿಲ್ಲ, ಪ್ರತಿಭಟಿಸಲಿಲ,್ಲ ಅವರ ವಾಕ್ ಸ್ವಾತಂತ್ರವನ್ನು ಗೌರವಿಸಿದರು. ಇವರಲ್ಲಿ ಅನೇಕರು ರಕ್ತಪಾತಕ್ಕೆ ಕರೆಕೊಡುವ ಭಾಷಣವನ್ನು ಮಾಡಿದರೂ ಪ್ರತಿಭಟನೆ ವ್ಯಕ್ತವಾಗಲಿಲ್ಲ. ಪೊಲೀಸರು ಕ್ರಮ ಕೈಗೊಳ್ಳಲಿಲ್ಲ. ವಾಸ್ತವ ಸಂಗತಿ ಹೀಗಿರುವಾಗ ಎಲ್ಲರೂ ಸೌಹಾರ್ದದಿಂದ ಬದುಕಬೇಕೆಂದು ಕರೆಕೊಡಲು ಬರುತ್ತಿರುವ ಕೇರಳದ ಮುಖ್ಯಮಂತ್ರಿ ಅವರಿಗೆ ಈ ಸಮಾಜ ವಿರೋಧಿ ಶಕ್ತಿಗಳು ಬೆದರಿಕೆ ಹಾಕುತ್ತಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಪ್ರಸಂಗ ಬಂದರೆ ಇಂತಹವರನ್ನು ಗಡಿಪಾರು ಮಾಡಲು ಕ್ರಮಕೈಗೊಳ್ಳಬೇಕು.
ಹಿಂದೂ ಧರ್ಮದ ಹೆಸರಿನಲ್ಲಿ ಮಾಡಬಾರದ ಅನಾಚಾರವನ್ನು ಮಾಡುವ ಈ ಸಮಾಜವಿರೋಧಿ ಶಕ್ತಿಗಳು ರಾಮಮಂದಿರ, ಗೋಹತ್ಯೆ ನಿಷೇಧ, ಲವ್ ಜಿಹಾದ್, ಬುರ್ಖಾದಂತಹ ವಿವಾದಗಳನ್ನು ಸೃಷ್ಟಿಸಿದವು. ತಮ್ಮ ಬಂಡವಾಳ ಬಯಲಾಗುತ್ತಾ ಬಂದಂತೆಲ್ಲ ಅವು ಈಗ ದೇಶಪ್ರೇಮದ ಬಗ್ಗೆ ಮಾತನಾಡತೊಡಗಿವೆ. ಆದರೆ, ಇತ್ತೀಚೆಗೆ ಭಾರತದ ಸೇನಾ ನೆಲೆಗಳ ರಹಸ್ಯವನ್ನು ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐಗೆ ಮಾರಾಟ ಮಾಡಿದ ಬಿಜೆಪಿಯ ಐಟಿ ಸೆಲ್ ಪದಾಧಿಕಾರಿಗಳ ಬಂಡವಾಳ ಬಯಲಾಗಿದೆ. ಇವರಲ್ಲಿ ಅನೇಕರು ಸಂಘಪರಿವಾರದ ಕಾರ್ಯಕರ್ತರಾಗಿದ್ದಾರೆ. ಮಹಾರಾಷ್ಟ್ರದ ಇನ್ನೊಬ್ಬ ಬಿಜೆಪಿ ಸಂಸದ ಗಡಿಯಲ್ಲಿ ಹಗಲು ರಾತ್ರಿ ದೇಶ ಕಾಯುವ ನಮ್ಮ ಯೋಧರ ಹೆಂಡಂದಿರ ಶೀಲದ ಬಗ್ಗೆ ಮಾತನಾಡಿ ಉಗಿಸಿಕೊಂಡಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಂತೂ ಇವರು ಮಾಡದ ಪಾತಕ ಕೃತ್ಯಗಳಿಲ್ಲ. ಇಂತಹವರ ಒತ್ತಡಕ್ಕೆ ಪೊಲೀಸ್ ಇಲಾಖೆ ಮಣಿಯಬಾರದು. ಕರಾವಳಿಯ ಪೊಲೀಸ್ ಇಲಾಖೆ ಸಂಘಪರಿವಾರದ ನಿಯಂತ್ರಣದಲ್ಲಿದೆ ಎಂಬ ಆರೋಪವಿದೆ. ಈ ಆರೋಪದಿಂದ ಮುಕ್ತವಾಗಬೇಕಾದರೆ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ಐಕ್ಯತಾ ರ್ಯಾಲಿಯನ್ನುದ್ದೇಶಿಸಿ ಭಾಷಣ ಮಾಡಲು ಬರುತ್ತಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ನಮ್ಮ ಗೃಹಸಚಿವರು ತಕ್ಷಣ ಎಚ್ಚೆತ್ತು ಕರಾವಳಿಯಲ್ಲಿ ನಡೆಯುತ್ತಿರುವ ಈ ವಿದ್ಯಮಾನಗಳ ಬಗ್ಗೆ ಗಮನ ಹರಿಸಬೇಕು. ನಮ್ಮ ಸಮಾಜ ಸಂವಿಧಾನದ ಅನ್ವಯ ರೂಪುಗೊಂಡ ಕಾನೂನಿನ ಚೌಕಟ್ಟಿನಲ್ಲಿ ನಡೆಯಬೇಕಾಗುತ್ತದೆ. ಸಂವಿಧಾನದತ್ತವಾದ ವಾಕ್ ಸ್ವಾತಂತ್ರದನ್ವಯ ಭಾಷಣ ಮಾಡಲು ಯಾವ ದೊಣ್ಣೆ ನಾಯಕರ ಅಪ್ಪಣೆಯೂ ಬೇಕಾಗಿಲ್ಲ.







