ಕೂಲಿ ಕಾರ್ಮಿಕರ ನಕಲಿ ಎನ್‌ಕೌಂಟರ್: ನಾಲ್ವರು ಪೊಲೀಸರಿಗೆ ಜೀವಾವಧಿ ಶಿಕ್ಷೆ

ಗಾಝಿಯಾಬಾದ್, ಫೆ.23: ನಕಲಿ ಎನ್‌ಕೌಂಟರ್‌ನಲ್ಲಿ ನಾಲ್ವರು ಕೂಲಿ ಕಾರ್ಮಿಕರನ್ನು ಕೊಂದ ಆರೋಪದಲ್ಲಿ ನಾಲ್ವರು ಪೊಲೀಸರಿಗೆ ಸಿಬಿಐ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
1996ರ ನವೆಂಬರ್ 8ರಂದು ದೀಪಾವಳಿಗೆ ನಾಲ್ಕು ದಿನ ಮುನ್ನ ಭೋಜ್‌ಪುರದ ಜಸ್ಬೀರ್ (23), ಜಲಾಲುದ್ದೀನ್ (17), ಅಶೋಕ್ (17) ಹಾಗೂ ಪ್ರವೇಶ್ (17) ಎಂಬ ನಾಲ್ವರು ಯುವಕರು ದೀಪಾವಳಿಗೆ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಪಿಲ್ಕ್ವಾನಾಗೆ ತೆರಳಿದ್ದರು. ಅವರು ಮನೆಗೆ ಮರಳುತ್ತಿದ್ದಾಗ, ಪೊಲೀಸ್ ಠಾಣೆ ಸಮೀಪದ ಮಕ್ಚಾರಿ ಚೌಕ್‌ನ ಚಹಾ ಅಂಗಡಿ ಬಳಿ ಅವರನ್ನು ತಡೆಯಲಾಯಿತು. ಕೆಲ ಗಂಟೆಗಳ ಬಳಿಕ ನಕಲಿ ಎನ್‌ಕೌಂಟರ್‌ನಲ್ಲಿ ಹಾಡಹಗಲೇ ಅವರನ್ನು ಹತ್ಯೆ ಮಾಡಲಾಯಿತು.
ಭೋಜ್‌ಪುರ ಠಾಣೆಯ ಮುಖ್ಯಸ್ಥ ಲಾಲ್ ಸಿಂಗ್, ಸಬ್ ಇನ್‌ಸ್ಪೆಕ್ಟರ್ ಜೋಗಿಂದರ್ ಸಿಂಗ್, ಪೇದೆಗಳಾದ ಸೂರ್ಯ ಭಾನ್ ಹಾಗೂ ಸುಭಾಶ್ಚಂದ್ ಅವರ ವಿರುದ್ಧ ಹತ್ಯೆ, ಸುಳ್ಳು ಪುರಾವೆ ಒದಗಿಸಿದ್ದು ಹಾಗೂ ಸಾಕ್ಷ್ಯ ನಾಶ ಮಾಡಿದ ಆರೋಪಕ್ಕಾಗಿ ಶಿಕ್ಷೆ ವಿಧಿಸಲಾಗಿದೆ ಎಂದು ಸಿಬಿಐ ವಿಶೇಷ ನ್ಯಾಯಾಧೀಶ ರಾಜೇಶ್ ಚೌಧರಿ ಪ್ರಕಟಿಸಿದ್ದಾರೆ.
"ಕೊನೆಗೂ ನ್ಯಾಯ ದೊರಕಿದೆ. ಹತ್ಯೆಗೀಡಾದ ನಾಲ್ಕು ಮಂದಿಯ ವಿರುದ್ಧ ಯಾವ ಅಪರಾಧ ಕೃತ್ಯದ ದೂರು ಕೂಡಾ ಇರಲಿಲ್ಲ. ವಿನಾ ಕಾರಣ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಕ್ರೌರ್ಯಕ್ಕೆ ಕಾರಣರಾದವರನ್ನು ನ್ಯಾಯಾಲಯ ಶಿಕ್ಷಿಸಿದೆ. 20 ವರ್ಷಗಳಿಂದ ಸಂತ್ರಸ್ತರ ಕುಟುಂಬಗಳು ಅನುಭವಿಸುತ್ತಿದ್ದ ನರಳಿಕೆಗೆ ನ್ಯಾಯ ಸಿಕ್ಕಿದೆ" ಎಂದು ಸಾರ್ವಜನಿಕ ಅಭಿಯೋಜಕ ರಾಜನ್ ದಹಿಯಾ ಹೇಳಿದ್ದಾರೆ.
ಹತ್ಯೆಗೀಡಾದವರು ಅಪರಾಧಿಗಳು ಎಂದು ಆರಂಭಿಕ ತನಿಖೆಯಲ್ಲಿ ಹೇಳಲಾಗಿತ್ತು. ಆದರೆ ಅದಕ್ಕೆ ಪೊಲೀಸರು ಸಲ್ಲಿಸಿದ ಪುರಾವೆಗಳು ಅದನ್ನು ಸಮರ್ಥಿಸುವಂತಿರಲಿಲ್ಲ. ಇವರು ದೇಸಿ ಪಿಸ್ತೂಲ್‌ಗಳನ್ನು ಹೊಂದಿದ್ದು, ಇದರ ಮೂಲಕ ಗುಂಡು ಹಾರಿಸಿದ್ದರು ಎಂದು ಹೇಳಲಾಗಿತ್ತು. ಇದನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾಗಿ ಪೊಲೀಸರು ಹೇಳಿದ್ದರು. ಆದರೆ ಅಪರಾಧ ಸ್ಥಳದಲ್ಲಿ ಈ ಪಿಸ್ತೂಲಿನಿಂದ ಹೊಡೆದ ಯಾವ ಗುಂಡೂ ಪತ್ತೆಯಾಗಿರಲಿಲ್ಲ ಎಂದು ದಹಿಯಾ ವಿವರಿಸಿದ್ದಾರೆ. ಇದರ ಬದಲು ಜಸ್ಬೀರ್ ದೇಹದಲ್ಲಿ ಪತ್ತೆಯಾದ ಒಂದು ಗುಂಡು ಐಪಿಎಸ್ ಅಧಿಕಾರಿಯ ಅಧಿಕೃತ ಪಿಸ್ತೂಲಿನಿಂದ ಸಿಡಿದದ್ದು ಎನ್ನುವುದು ಸಾಬೀತಾಗಿತ್ತು.







